ಮಡಿಕೇರಿ: ಕೊಡಗು ಜಿಲ್ಲಾದ್ಯಂತ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಮಡಿಕೇರಿ ತಾಲೂಕಿನಲ್ಲಿ ಮಳೆ ತೀವ್ರತೆ ಪಡೆದುಕೊಂಡಿದ್ದು, ಜನರ ದೈನಂದಿನ ಬದುಕಿಗೆ ಅಡಚಣೆಯಾಗಿದೆ. ಅಲ್ಲದೆ ಕೃಷಿ ಫಸಲಿಗೆ ಅಪಾರ ಹಾನಿ ಸಂಭವಿಸುವ ಸಾಧ್ಯತೆಗಳಿದೆ.
ಜಿಲ್ಲಾ ಕೇಂದ್ರ ಮಡಿಕೇರಿ ಯಲ್ಲಿ ಮಂಜು ಕವಿದ ವಾತಾ ವರಣದೊಂದಿಗೆ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಮೈಕೊರೆಯುವ ಚಳಿ ಇದೆ. ರಸ್ತೆಗಳ ಮೇಲೆ ಹರಿಯುತ್ತಿರುವ ನೀರು ಜನ ಮತ್ತು ವಾಹನಗಳ ಸಂಚಾರಕ್ಕೆ ತೊಡಕು ಉಂಟು ಮಾಡುತ್ತಿದೆ.
ಹೊಂಡ ಗುಂಡಿಗಳಾಗಿರುವ ಮಡಿಕೇರಿ ನಗರದ ಬಹುತೇಕ ರಸ್ತೆಗಳು ಮಳೆಯಿಂದ ಕೆಸರುಮಯವಾಗಿದೆ. ಗ್ರಾಮೀಣ ಭಾಗದಲ್ಲೂ ಅತ್ಯಧಿಕ ಮಳೆಯಾಗುತ್ತಿದ್ದು, ಕೆಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗುತ್ತಿದೆ. ಕಳೆದೊಂದು ದಿನದ ಅವಧಿಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಇಂಚಿಗೂ ಹೆಚ್ಚಿನ ಮಳೆ ದಾಖಲಾಗಿದೆ. ನದಿ ಪಾತ್ರದ ನಾಪೋಕ್ಲು, ಬಲಮುರಿ, ಮೂರ್ನಾಡು, ಸಿದ್ದಾಪುರ ಭಾಗಗಳಲ್ಲೂ ಮಳೆಯಾಗುತ್ತಿದೆ.
ಅತಿಯಾದ ಮಳೆಯಿಂದಾಗಿ ಕಾಫಿ ಕೃಷಿಗೆ ಅಪಾರ ಹಾನಿಯಾಗುತ್ತಿದ್ದು, ಕಾಯಿಗಳು ಕೊಳೆತು ಉದುರುತ್ತಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯ ಬೆನ್ನಲ್ಲೆ ಈಗ ಅಲ್ಲಲ್ಲಿ ಭತ್ತದ ಗದ್ದೆಗಳಲ್ಲಿ ಕೀಟ ಬಾಧೆ ಕಾಣಿಸಿಕೊಳ್ಳುತ್ತಿದೆ.
ಹಾರಂಗಿ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಇಂದಿನ ನೀರಿನ ಮಟ್ಟ 2,858.57 ಅಡಿಗಳಾಗಿವೆ. ಕಳೆದ ವರ್ಷ ಇದೇ ದಿನ 2,856.44 ಅಡಿಗಳಾಗಿವೆ.