Advertisement

C.T.Ravi Case: ನಕ್ಸಲರು ರವಿಗೆ ಗುಂಡು ಹೊಡೆಯಲಿ ಎಂದು ಕರೆದೊಯ್ದರೇ?: ಆರ್‌.ಅಶೋಕ್‌

04:38 AM Dec 22, 2024 | Team Udayavani |

ಬೆಂಗಳೂರು: ವಿಧಾನಪರಿಷತ್‌ ಸದಸ್ಯರೋರ್ವರಿಗೆ ಸುರಕ್ಷತೆ ಕೊಡಲು ಸಾಧ್ಯವಾಗದ ಸರಕಾರ, ಜನರನ್ನು ಅಪರಾಧಿಗಳಿಂದ ಹೇಗೆ ಕಾಪಾಡುತ್ತದೆ? ಸಿ.ಟಿ. ರವಿ ಅವರನ್ನು ಪೊಲೀಸರು ರಾತ್ರಿಯಿಡೀ ಬಸ್ಸಿನಲ್ಲಿ ಸುತ್ತಾಡಿಸಿದ್ದಾರೆ. ಅವರ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ವಿಪಕ್ಷದ ನಾಯಕ ಆರ್‌.ಅಶೋಕ್‌ ಆಗ್ರಹಿಸಿದರು.

Advertisement

ವಿಧಾನಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸಿ.ಟಿ. ರವಿ ನಕ್ಸಲ್‌ ಬಾಧಿತ ಪ್ರದೇಶದಿಂದ ಬಂದವರು. ಅವರಿಗೆ ಮೊದಲಿನಿಂದಲೂ ನಕ್ಸಲರಿಂದ ಪ್ರಾಣ ಬೆದರಿಕೆ ಇತ್ತು. ಅಂತಹವರನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿದ್ದಾರೆ. ಹಾಗಿದ್ದರೆ, ನಕ್ಸಲರು ಗುಂಡು ಹೊಡೆಯಲಿ ಎಂಬ ಕಾರಣಕ್ಕೇ ಕರೆದೊಯ್ದರೆ ಎಂದವರು ಅನುಮಾನ ವ್ಯಕ್ತಪಡಿಸಿದರು.

ಸಿ.ಟಿ. ರವಿ ಪ್ರಕರಣವನ್ನು ಸದನದ ಒಳಗೆ ಬಗೆಹರಿಸಬೇಕಿತ್ತು. ಅದನ್ನು ಬಿಟ್ಟು ಬೇರೆಲ್ಲೋ ಪ್ರಕರಣ ದಾಖಲಿಸಿ, ರಾತ್ರಿಯಿಡೀ ಬಸ್ಸಿನಲ್ಲಿ ಸುತ್ತಾಡಿಸಲಾಗಿದೆ. ಹೀಗೆ ಬಂಧಿಸಿದ ಪೊಲೀಸ್‌ ಅಧಿಕಾರಿಯ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ. ಸಿ.ಟಿ.ರವಿಯನ್ನು ಬಂಧಿಸಿದ ಬಳಿಕ ಪೊಲೀಸ್‌ ಅಧಿಕಾರಿಗಳು ನಿರಂತರವಾಗಿ ದೂರವಾಣಿ ಸಂಪರ್ಕಗಳಲ್ಲಿದ್ದರು. ಇದರಲ್ಲಿ ಸಾಕಷ್ಟು ಅನುಮಾನಗಳಿವೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

“ಶಾಸಕ ಸಿ.ಟಿ.ರವಿ ಅವರನ್ನು ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿದ್ದರಂತೆ. ಮುಖ್ಯಮಂತ್ರಿ ಹಾಗೂ ಸಚಿವರನ್ನೂ ಸುರಕ್ಷತೆ ದೃಷ್ಟಿಯಿಂದ ಕಬ್ಬಿನ ಗದ್ದೆ ಅಥವಾ ಕಲ್ಲು ಕ್ವಾರಿಗೆ ಕರೆದುಕೊಂಡು ಹೋಗಿ ಬಿಡುವುದು ಉತ್ತಮ.”
– ಆರ್‌.ಅಶೋಕ್‌, ವಿಪಕ್ಷದ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next