Advertisement

ಗೋವಾದಲ್ಲಿ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ

06:49 PM Jul 19, 2023 | Team Udayavani |

ಪಣಜಿ: ಗೋವಾ  ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ ಮತ್ತು ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ದುರ್ಘಟನೆ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

Advertisement

ಕಲಂಗುಟ್ ನಾಜರಿ  ರೆಸಾರ್ಟ್ ಪಾರ್ಕಿಂಗ್ ಸ್ಥಳದ ಬಳಿ ಒಂದು ಹುಂಡೈ ಕಾರು ಮತ್ತು ಬಜಾಜ್ ಪಲ್ಸರ್ ಬೈಕ್ ಈ ವಾಹನಗಳ ಮೇಲೆ ಮರ ಮುರಿದುಬಿದ್ದು ಹೆಚ್ಚಿನ ಹಾನಿ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಪಿಳರ್ಣ ಅಗ್ನಿಶಾಮಕ ದಳವು ಸ್ಥಳಕ್ಕೆ ಧಾವಿಸಿ ಎರಡು ವಾಹನಗಳ ಮೇಲೆ ಬಿದ್ದ ದೊಡ್ಡ ಮರಗಳನ್ನು ತೆರವುಗೊಳಿಸಿದೆ. ಈ  ಘಟನೆಯಿಂದ 1 ಲಕ್ಷ ರೂಪಾಯಿ ಮೌಲ್ಯದ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಆರೆಂಜ್ ಅಲರ್ಟ್
ಮುಂದಿನ ಐದು ದಿನಗಳ ಕಾಲ ಗೋವಾದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಐದು ದಿನಗಳಲ್ಲಿ ಗೋವಾ, ಕೊಂಕಣ ಮತ್ತು ಮಧ್ಯ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ನಾಗರಿಕರು ಜಾಗೃತರಾಗಿರುವಂತೆ ಎಚ್ಚರಿಕೆ ನೀಡಲಾಗಿದೆ. ಗೋವಾದ ಸಾಖಳಿಯಲ್ಲಿ ವಾಳವಂಟಿ ನದಿಯು ಪೂರ್ಣ ತುಂಬಿ ಹರಿಯುತ್ತಿದೆ, ಇದರಿಂದಾಗಿ ನದಿ ಪಾತ್ರದ ಮನೆ ಮತ್ತು ಕೃಷಿ ಭೂಮಿಗೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿಯುಂಟಾಗಿದೆ.

ಗೋವಾದಲ್ಲಿ ಇನ್ನೂ ಮಳೆ ಮುಂದುವರೆದರೆ ಈ ಭಾಗದ ಜನರು ಇನ್ನೂ ಹೆಚ್ಚಿನ ತೊಂದರೆ ಅನುಭವಿಸುವ ಆತಂಕ ಮನೆ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next