ಬಜಪೆ: ಜಡಿಮಳೆ ಎಲ್ಲ ಕೃಷಿಯನ್ನು ಭಾದಿಸಿ,ನಷ್ಟಕ್ಕೆ ಕಾರಣವಾಗಿದೆ. ಈಗಾಗಲೇ ಒಮ್ಮೆ ಬಿತ್ತನೆ ಮಾಡಿದ ಬೆಳೆಗಳು ಮಳೆಗೆ ಕೊಳೆತು ನಾಶವಾಗಿದೆ. ಕೆಲ ಕೃಷಿಕರು ಬೆಳೆ ಹಾನಿ, ನಷ್ಟವನ್ನು ಅನುಭವಿಸಿದರೂ ತಮ್ಮ ಕಾಯಕವನ್ನು ಬಿಡದೇ ಮತ್ತೆ ಪ್ರಯತ್ನ ಮುಂದುವರಿಸಿದ್ದು ಅವರ ಕಾಯಕಕ್ಕೆ ಭೇಷ್ ಎನ್ನಲೇ ಬೇಕು. ಬಜಪೆ ಊರಿನ ತರಕಾರಿಗೆ ಪ್ರಸಿದ್ಧವಾಗಿದೆ. ತಮ್ಮ ಹಿರಿಯರಿಂದ ನಡೆದು ಕೊಂಡು ಬಂದಿರುವ ಬೆಂಡೆ, ಹೀರೆ, ಮೆಣಸು, ಮುಳ್ಳುಸೌತೆ ತರಕಾರಿಗಳನ್ನು ಇಂದಿಗೂ ಎಕರೆ ಗಟ್ಟಲೆ ಪ್ರದೇಶಗಳಲ್ಲಿ ಬೆಳೆಸುತ್ತಾರೆ.
ಬಜಪೆ ಅಡ್ಕಬಾರೆ, ಹಳೆ ವಿಮಾನ ನಿಲ್ದಾಣ, ಪಡುಪೆರಾರ ಪಡೀಲ್ ಪ್ರದೇಶಗಳಲ್ಲಿ ತರಕಾರಿ ಬೆಳೆಗೆ ಪ್ರಸಿದ್ಧಿ ಪಡೆದಿದೆ. ಅದರೆ ಮಾಡಿದ ತರಕಾರಿ ಬೆಳೆಗಳು ಜಡಿಮಳೆ ಈಗಾಗಲೇ ಕರಗಿ ಹೋಗಿವೆ. ಹೆಚ್ಚಾಗಿ ನಾಗರ ಪಂಚಮಿ, ಅಷ್ಟಮಿ, ಚೌತಿ ಹಬ್ಬವನ್ನು ಗಮನ ದಲ್ಲಿಟ್ಟು ಊರಿನ ಬೆಂಡೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವ ಕಾರಣ ಈ ಬೆಳೆಯನ್ನು ಕೃಷಿಕರು ಬೆಳೆಯುತ್ತಾರೆ.
ಹೀರೆ ಬೆಳೆನಾಶ
ಬಜಪೆ ಅಡ್ಕಬಾರೆಯ ಲಾನ್ಸಿ ಡಿ’ಸೋಜಾ ಸುಮಾರು 50 ಸೆಂಟ್ಸು ಜಾಗದಲ್ಲಿ ಹೀರೆ ಕಾಯಿ ಬೆಳೆಸಿದ್ದರು. ಮಳೆ ಬರುವ ಮುಂಚೆ ಸುಮಾರು 50 ಕೆ.ಜಿ. ಹೀರೆಯನ್ನು ಮಾರಾಟ ಮಾಡಿದ್ದಾರೆ. ಮಳೆ ಬಂದ ಮೇಲೆ ಗಿಡಗಳ ಬುಡದಲ್ಲಿ ಮಳೆ ನೀರು ನಿಂತು ಕೀಟಗಳ ಭಾದೆಯಿಂದ ಬೆಳೆ ಹಾಳಾಗಿದೆ.
ಮಳೆಯಿಂದ ಬೆಳೆಗಳಿಗೆ ಕೀಟ ಭಾದೆ ಹೆಚ್ಚು. ಬಿಸಿಲು ಬಂದರೆ ಉತ್ತಮ. ಕೀಟನಾಶಕ ಸಿಂಪಡಣೆ ಅನಿವಾರ್ಯ ವಾಗಿದೆ. ಮೆಣಸು ಗಿಡಗಳಿಗೂ ಕೂಡ ಮಳೆ ಬಾಧಿಸಿದೆ. ಊರಿನ ತರಕಾರಿಗೆ ಹೆಚ್ಚು ಬೇಡಿಕೆ ಇದೆ. ಅದರೆ ಮಳೆ ತರಕಾರಿ ಬೆಳೆಯನ್ನು ಕಾಡುತ್ತಿದೆ.
ಮಳೆಗೆ ಮೇಲೆಳದ ಬೆಂಡೆ ಗಿಡ
ಇಲ್ಲಿನ ಅನೇಕ ರೈತರು ಬೆಂಡೆಗೆ ಈಗಾಗಲೇ ಬಿತ್ತನೆ ನಡೆಸಿದ್ದು ಬೆಂಡೆಯ ಹೂ ಗಳು ಬಿಟ್ಟು ಬೆಂಡೆಯಾಗುವ ಸಮಯ. ಅದರೆ ಮಳೆಗೆ ಬೆಂಡೆ ಗಿಡ ಒಂದು ಅಡಿಯಷ್ಟು ಮೇಲೆ ಬಂದಿಲ್ಲ, ಇನ್ನೂ ಮಳೆ ಜಾಸ್ತಿ ಬಂದರೆ ಊರಿನ ತರಕಾರಿ ಸಿಗುವುದೇ ಕಷ್ಟ.ಕೆಲವೆಡೆ ಎರಡು ಬಾರಿ ಬಿತ್ತನೆ ಮಾಡಿದ್ದಾರೆ. ಮಳೆ ನೋಡಿ ತರಕಾರಿ ಬೆಳೆಸುವುದನ್ನು ಕೆಲವರು ಬಿಟ್ಟಿದ್ದಾರೆ.ಕೆಲ ರೈತರು ನಮಗೆ ವರ್ಷಪ್ರತೀ ಮಾಡುವ ಕಾಯಕ ನಷ್ಟ ವೆಂದು ಬಿಡಲು ಮನಸ್ಸು ಬರುವುದಿಲ್ಲ ಎನ್ನುತ್ತಾರೆ.