ಬೆಂಗಳೂರು: ಮಲೆನಾಡು, ಕರಾವಳಿ, ಕೊಡಗಿನಲ್ಲಿ ಮಳೆ ಅಬ್ಬರಿಸುತ್ತಿದ್ದು, ಆ ಭಾಗದ ನದಿಗಳಲ್ಲಿ ನೆರೆ ಬಂದಿದೆ. ಕೇರಳದ ವೈನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಬಿನಿ, ಕೆಆರ್‌ಎಸ್‌ಗಳಿಂದ ಅಪಾರ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಇದರಿಂದಾಗಿ ಕಾವೇರಿ ನದಿ ತೀರದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಈ ಮಧ್ಯೆ, ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ.
ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಮಳೆಯಾಗುತ್ತಿದೆ. ಕೆಆರ್‌ಎಸ್ ಜಲಾಶಯದ 27 ಗೇಟುಗಳಿಂದ 65 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದ್ದು, ನಿಮಿಷಾಂಬ, ಸಾಯಿ ಮಂದಿರ, ಸ್ನಾನಘಟ್ಟ ಸೇರಿದಂತೆ ಕಾವೇರಿ ಸಂಗಮದ ದೇವಾಲಯಗಳ ಬಳಿ ಬ್ಯಾರಿಕೇಡ್ ನಿರ್ಮಾಣ ಮಾಡಿ ನದಿ ತೀರಕ್ಕೆ ಯಾರೂ ಹೋಗದಂತೆ ಪೊಲೀಸರು ಎಚ್ಚರ ವಹಿಸಿದ್ದಾರೆ.
ನಿಮಿಷಾಂಬ ದೇವಾಲಯದ ಬಳಿ ಸ್ನಾನ ಮಾಡಿ ಬಟ್ಟೆ ಬದಲಿಸುವ ಕೊಠಡಿಗಳು, ಪಿಂಡ ಪ್ರದಾನ ಪ್ರದೇಶವಾದ ಪಶ್ಚಿಮವಾಹಿನಿಯ ಬಳಿ ಮಂಟಪಗಳು, ಸಾಯಿಮಂದಿರಗಳು ನೀರಲ್ಲಿ ಜಲಾವೃತವಾಗಿವೆ. ಶ್ರೀರಂಗಪಟ್ಟಣ ತಾಲೂಕಿನ ಗೌತಮ ಕ್ಷೇತ್ರ ಜಲಾವೃತವಾಗಿದ್ದು, ಮಠದಲ್ಲಿ ಗಜಾನನ ಸ್ವಾಮೀಜಿ ಹಾಗೂ ಭಕ್ತರು ಸಿಕ್ಕಿಹಾಕಿಕೊಂಡಿದ್ದಾರೆ. ಕೆಆರ್‌ಎಸ್ ಬೃಂದಾವನದಲ್ಲಿ ಕಾರಂಜಿಗೆ ಹೋಗುವ ಸೇತುವೆ ಮುಳುಗಡೆಯಾಗಿದ್ದು, ದೋಣಿವಿಹಾರ ಸ್ಥಗಿತಗೊಳಿಸಲಾಗಿದೆ.
ಕೇರಳದ ವೈನಾಡಿನಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಕಪಿಲಾ ನದಿ ಉಕ್ಕಿ ಹರಿಯುತ್ತಿದೆ. ಕಬಿನಿ ಜಲಾಶಯದಿಂದ ನೀರನ್ನು ಬಿಡಲಾಗುತ್ತಿದ್ದು, ತಿ.ನರಸೀಪುರ ಪಟ್ಟಣದ ತ್ರಿವೇಣಿ ಸಂಗಮ ಮೈದುಂಬಿ ಹರಿಯುತ್ತಿದ್ದು, ನಂಜನಗೂಡಿನ ಸ್ನಾನಘಟ್ಟದ 16 ಕಾಲು ಮಂಟಪ ಶೇ.90ರಷ್ಟು ಮುಳುಗಿದೆ. ಮಲ್ಲನಮೂಲೆ, ಸುತ್ತೂರು, ಹೊಮ್ಮರಗಳ್ಳಿ ಸೇತುವೆಗಳು ಜಲಾವೃತವಾಗಿದ್ದು, ಬೆಂಗಳೂರು-ಊಟಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಕರಾವಳಿಯಲ್ಲಿ ಮಳೆ ಅಬ್ಬರಿಸುತ್ತಿದ್ದು, ದ.ಕ.ಜಿಲ್ಲೆಯ ಜಿಲ್ಲೆಯ ಎಲ್ಲ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪ.ಪೂ.ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟದ ಸ್ವಲ್ಪ ಭಾಗ ಮುಳುಗಡೆಗೊಂಡಿದೆ. ನೆಲ್ಯಾಡಿಯ ಇಚಿಲಂಪಾಡಿಯಲ್ಲಿ ನೆರೆಗೆ ಮನೆಯೊಂದು ಜಲಾವೃತಗೊಂಡಿದ್ದು, ನೆರೆಗೆ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಲಾಗಿದೆ. ಮಂಗಳೂರಿನಲ್ಲಿ ಶುಕ್ರವಾರ ದಿನವಿಡೀ ಸುರಿದ ಭಾರೀ ಮಳೆಗೆ ಕುಲಶೇಖರದ ಬಳಿ ಮಣ್ಣು ಕುಸಿದು ಎರಡು ಮನೆಗಳಿಗೆ ಹಾನಿಯಾಗಿದ್ದು, ವ್ಯಕ್ತಿಯೊಬ್ಬ ಗಾಯಗೊಂಡಿದ್ದಾನೆ. ಕೊಟ್ಟಾರ ಚೌಕಿ ಪ್ರದೇಶ ಮತ್ತೆ ಮುಳುಗಡೆಯಾಗಿ, ಕೊಟ್ಟಾರ ಚೌಕಿ ಬಳಿಯಿರುವ ನಾಲ್ಕು ಅಂಗಡಿಗಳಿಗೆ ನೀರು ನುಗ್ಗಿತ್ತು. ನೇತ್ರಾವತಿ, ಕುಮಾರಧಾರಾ ನದಿಗಳು ತುಂಬಿ ಹರಿಯುತ್ತಿವೆ.
ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದ್ದು, ಮೂಡಿಗೆರೆ ತಾಲೂಕಿನ ಹೆಬ್ಟಾಳೆ ಸೇತುವೆ 8ನೇ ಬಾರಿಗೆ ಮುಳುಗಿತ್ತು. ಈ ಭಾಗದ ಅಡಿಕೆ, ಕಾಫಿ, ಕಾಳು ಮೆಣಸು ಮತ್ತು ತರಕಾರಿ ಬೆಳೆಗಳು ಹಾನಿಗೊಳಗಾಗಿದ್ದು, ರೈತರು ಆತಂಕಗೊಂಡಿದ್ದಾರೆ. ತುಂಗಾ ಹಾಗೂ ಭದ್ರಾ ಜಲಾಶಯಗಳ ಒಳ ಹರಿವು ತೀವ್ರಗತಿಯಲ್ಲಿ ಹೆಚ್ಚಳವಾಗಿದ್ದು, ಹೆಚ್ಚಿನ ನೀರನ್ನು ನದಿಗೆ ಬಿಡುತ್ತಿರುವುದರಿಂದ ಹರಿಹರ ತಾಲೂಕಿನ ನದಿ ತೀರದ ಗ್ರಾಮಗಳಿಗೆ ಪ್ರವಾಹದ ಪರಿಸ್ಥಿತಿ ಎದುರಾಗಿದೆ.
ಈ ಮಧ್ಯೆ, ಸಕಲೇಶಪುರ-ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ಹಳಿಗಳ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸಲಾಗಿದ್ದು, ಈ ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭಿಸಲಾಗಿದೆ. ಬುಧವಾರ ಈ ಮಾರ್ಗದಲ್ಲಿ ಸುಮಾರು 3 ಕಡೆ ಭೂಕುಸಿತ ಉಂಟಾಗಿತ್ತು.
ಈ ನಡುವೆ, ಕರಾವಳಿ, ಮಲೆನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.