Advertisement
ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ತೊಗರಿ ಈ ಬಾರಿ ಉತ್ತಮವಾಗಿ ಇಳುವರಿ ನೀಡಬಹುದು ಎನ್ನುವ ನಿರೀಕ್ಷೆಯಲ್ಲಿ ಈ ಭಾಗದ ರೈತರು ಇದ್ದರು. ಆದರೆ ಹೆಚ್ಚುವರಿ ಮಳೆಯಿಂದಾಗಿ ಹೊಲದಲ್ಲಿ ನೀರು ನಿಂತು ಹೂವು, ಕಾಯಿ ಬಿಡದೆ ಗೊಡ್ಡು ಬೆಳೆಯಾಗಿ ನಿಂತಿದೆ.
Related Articles
Advertisement
ಮೋಡ ಮುಸುಕಿದ ವಾತಾವರಣ ಇದ್ದುದರಿಂದ ಮಣ್ಣಿಗೆ ಜನ್ಯರೋಗ ಬಂದಿದೆ. ಮಾದನಹಿಪ್ಪರಗಿ ವಲಯದ 17988 ಹೆಕ್ಟೇರ್ ಪ್ರದೇಶದ ತೊಗರಿ ಬೆಳೆಯಲ್ಲಿ ಶೇ. 60ರಷ್ಟು ನಾಶವಾಗಿದೆ. ಗಿಡಗಳು ದೊಡ್ಡದಾಗಿ ಬೆಳೆದು, ಎಲೆಗಳು ಚಿಕ್ಕದಾಗಿ, ತಿಳಿ ಹಳದಿ ಬಣ್ಣದ ಮೋಸಾಯಿಕ್ ತರಹದ ಮಚ್ಚೆಗಳನ್ನು ಹೊಂದಿ ಮುಟುರುಗೊಂಡಿವೆ. ಗಿಡಗಳಿಗೆ ಹೂವು ಇಲ್ಲ, ಕಾಯಿಯೂ ಇಲ್ಲ. ಆಳೆತ್ತರಕ್ಕೆ ಮಾತ್ರ ಬೆಳೆದಿವೆ. ಈ ಗೊಡ್ಡು ರೋಗವು ನಂಜಾಣುವಿನಿಂದ ಬಂದು ಅಸೇರಿಯಾ ಕಜಾನಿ ಎನ್ನುವ ರಸ ಹೀರುವ ನುಶಿಗಳಿಂದ ಗಿಡದಿಂದ-ಗಿಡಕ್ಕೆ, ಹೊಲದಿಂದ-ಹೊಲಕ್ಕೆ ಗಾಳಿಯ ಮುಖಾಂತರ ಹರಡುತ್ತದೆ. ಈ ತರಹ ಕಾಣುವ ಗಿಡಗಳನ್ನು ಪ್ರಾರಂಭದಲ್ಲಿಯೇ ಕಿತ್ತು ನಾಶಪಡಿಸಬೇಕಿತ್ತು. ರೋಗ ಪ್ರಾರಂಭಿಕ ಹಂತದಲ್ಲಿರುವಾಗ ಡೈಕೋಪಾಲ 20 ಇಸಿಯನ್ನು 2.5 ಮಿ.ಲೀಟರನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿದ್ದರೆ ಬೆಳೆ ಬರಬಹುದಿತ್ತು. ಆದರೆ ರೈತರು ಯಾವುದೇ ಮುಂಜಾಗ್ರತೆ ವಹಿಸಿರಲಿಲ್ಲ.
ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ಸಲಹೆ
ವಾಡಿಕೆಯಂತೆ ಮಳೆ ಬಂದಿದ್ದರೆ ರೈತರಿಗೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಹವಾಮಾನದ ವೈಪರಿತ್ಯದಿಂದ ಮಳೆ ಬಂದಿದೆ. ಮಳೆ ಹೆಚ್ಚಾಗುವ ಪ್ರದೇಶದಲ್ಲಿ ಗೊಡ್ಡು ರೋಗ ನಿರೋಧಕ ತಳಿಗಳಾದ ಬಿಎಸ್.ಎಂ.ಆರ್ 736, ಆಯ್.ಸಿ.ಪಿ.ಎಲ್ 87119 (ಆಶಾ) ತಳಿ ಬೆಳೆಯಬೇಕು. ಗೊಡ್ಡು ರೋಗ ಬರುವ ಪ್ರದೇಶಗಳಲ್ಲಿ ಮಾರುತಿ ತಳಿ ಬೆಳೆಯಬಾರದು. ರೈತರು ತೊಗರಿ ಬಿತ್ತುವುದಕ್ಕಿಂತ ಮುಂಚೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಸಾಗುವಳಿ ಕೃಷಿ ಚಟುವಟಿಕೆ ಆರಂಭಿಸಬೇಕು. ಮಳೆ ಹೆಚ್ಚು ಬರುವ ಮುನ್ನ ಸೂಚನೆ ಕಂಡು ಬಂದರೆ, ಹೊಲದಲ್ಲಿ ನೀರು ಬಸಿದು ಹೋಗುವಂತೆ ಮಾಡಲು ಏರುಬದುಗಳನ್ನು ನಿರ್ಮಿಸಿ ಬಿತ್ತಬೇಕು. ಮಡ್ಡಿ ಪ್ರದೇಶಗಳಲ್ಲಿ ತೇವಾಂಶ ಹಿಡಿಯದ ಹೊಲಗಳಲ್ಲಿ ತೊಗರಿ ಸಮೃದ್ಧವಾಗಿ ಬೆಳೆ ಬಂದಿದೆ. ಆದರೆ ಹೂವು, ಕಾಯಿ ಹಿಡಿದಿಲ್ಲ. ಅಲ್ಲೊಂದು, ಇಲ್ಲೊಂದು ಕಾಯಿ ಹಿಡಿದಿದೆ. ಪ್ರಸಕ್ತ ವರ್ಷ ಶೇ. 35ರಿಂದ 40ರಷ್ಟು ಇಳುವರಿ ಬರಬಹುದು ಎಂದು ಈ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕು.ಸಾಕ್ಷಿ ಅಲಮದ್ ತಿಳಿಸಿದ್ದಾರೆ.
-ಪರಮೇಶ್ವರ ಭೂಸನೂರ