ವಿಜಯಪುರ : ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮನೆ ಕುಸಿದು ಓರ್ವ ಬಾಲಕಿ ಮೃತಪಟ್ಟರೆ, ಕೃಷ್ಣಾ ನದಿಗೆ ಅನಾಮಧೇಯ ಶವ ಹರಿದು ಬಂದ ಘಟನೆ ವರದಿಯಾಗಿದೆ.
ಜಿಲ್ಲೆಯಲ್ಲಿ ರವಿವಾರವೂ ಮಳೆ ಮುಂದುವರೆದಿದೆ. ಪರಿಣಾಮ ಮುದ್ದೇಬಿಹಾಳ ತಾಲೂಕು ಡೊಂಕಮಡು ಗ್ರಾಮದಲ್ಲಿ ಮಳೆಗೆ ಮನೆ ಕುಸಿದು 11 ವರ್ಷದ ಬಾಲಕಿ ಮೃತಪಟ್ಟಿದ್ದು, ಮೃತಳನ್ನು ಮರೆಮ್ಮ ಹುಲಗಪ್ಪ ಬಿಜ್ಜೂರ ಎಂದು ಗುರುತಿಸಲಾಗಿದೆ. ಸುದ್ದಿ ತಿಳಿದು ತಹಸೀಲ್ದಾರ್ ಜಿ.ಎಸ್.ಮಳಗಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಮತ್ತೊಂದೆಡೆ ಮುದ್ದೇಬಿಹಾಳ ತಾಲೂಕು ರಕ್ಕಸಗಿ ಗ್ರಾಮದ ಬಳಿ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು, ನದಿ ತೀರದಲ್ಲಿ ಅನಾಮಧೇಯ ಶವ ಪತ್ತೆಯಾಗಿದೆ. ಮುದ್ದೇಬಿಹಾಳ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.
ಇದನ್ನೂ ಓದಿ:ಭಾರಿ ಮಳೆಗೆ ಕುಸಿದು ಬಿತ್ತು ಹೊಸೂರು ಸೇತುವೆ : ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ
ಈ ಮಧ್ಯೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಬಳಿ ರಾಜ್ಯ ಹೆದ್ದಾರಿಯಲ್ಲಿ ಭಾರಿ ಗಾತ್ರದ ಮರವೊಂದು ಉರುಳಿಬಿದ್ದು, ಈ ಮಾರ್ಗದ ಮೂಲಕ ರಾಯಚೂರು, ಯಾದಗಿರಿ, ಕಲಬುರ್ಗಿ ಜಿಲ್ಲೆ ಹಲವು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.
ಮತ್ತೊಂದೆಡೆ ಅಧಿಕ ಮಳೆಯ ಕಾರಣ ಪಾಳು ಬಿದ್ದಿದ್ದ ಕೊಳವೆ ಬಾವಿಯಿಂದ ಸ್ವಯಂ ನೀರು ಉಕ್ಜುತ್ತಿವೆ. ತಾಳಿಕೋಟೆ ತಾಲೂಕ ಕೇಂದ್ರಕ್ಕೆ ಹೊಂದಿಕೊಂಡಿರುವ ಬಸವರಾಜ ಕುಂಬಾರ ಅವರ ಜಮೀನಿನಲ್ಲಿ ವಿಫಲ ಕೊಳವೆ ಬಾವಿಯಿಂದ ನೀರು ಸ್ವಯಂ ಉಕ್ಕಿ ಹರಿಯುತ್ತಿದೆ. ಅಷ್ಟರ ಮಟ್ಡಿಗೆ ಮಳೆ ಸುರಿಯುತ್ತಿದ್ದು, ಅಂತರ್ಜಲ ಮಟ್ಟ ಹೆಚ್ಚಳವಾಗಿದೆ.