Advertisement
ಸುಳ್ಯ, ಪುತ್ತೂರು ವಿಟ್ಲದ ವಿವಿಧ ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ. ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ತಾಲೂಕುಗಳಲ್ಲಿ ಹಗಲು ಹೊತ್ತು ಮೋಡ ಕವಿದ ವಾತಾವರಣ ಇತ್ತು. ಉಡುಪಿ ಜಿಲ್ಲೆಯಲ್ಲಿ ಹಗಲಿನಲ್ಲಿ ಬಿಸಿಲಿದ್ದರೂ ಸಂಜೆಯಾಗುತ್ತಿದ್ದಂತೆ ಉಡುಪಿ, ಮಣಿಪಾಲ, ಕಾಪು, ಶಿರ್ವ, ಕಟಪಾಡಿ, ಕಲ್ಯಾಣಪುರ ಸಂತೆಕಟ್ಟೆ ಸೇರಿದಂತೆ ವಿವಿಧೆಡೆ ಭಾರೀ ಮಳೆ ಬಂದಿದೆ. ನಗರದ ರಸ್ತೆಗಳಲ್ಲಿಯೂ ಭಾರೀ ಪ್ರಮಾಣ ದಲ್ಲಿ ನೀರು ಹರಿಯಿತು. ವಾರಾಂತ್ಯ ಮತ್ತು ಭಾರೀ ಮಳೆಯ ಕಾರಣ ಉಡುಪಿಯ ಕಲ್ಸಂಕ, ಕರಾವಳಿ ಜಂಕ್ಷನ್ ಮೊದಲಾದೆಡೆ ವಾಹನಗಳ ದಟ್ಟಣೆ ಹೆಚ್ಚಿಗೆ ಕಂಡುಬಂದು ಟ್ರಾಫಿಕ್ ಜಾಮ್ ಆಯಿತು. ಕಾರ್ಕಳ ಮತ್ತು ಕುಂದಾಪುರ ತಾಲೂಕಿನಲ್ಲಿ ಲಘು ಪ್ರಮಾಣದಲ್ಲಿ ಮಳೆಯಾಯಿತು.
ರಾತ್ರಿ ವೇಳೆ ದಿಢೀರ್ ಮಳೆ ಬಂದ ಕಾರಣ ನಗರದ ತಗ್ಗು ಪ್ರದೇಶಗಳ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ತಡೆಯುಂಟಾಯಿತು. ಕೊಟ್ಟಾರ, ಫೋರ್ತ್‌ಮೈಲ್ ಪ್ರದೇಶ ಗಳಲ್ಲಿ ಚರಂಡಿಯಲ್ಲಿ ನೀರು ತುಂಬಿ ಅಂಗಡಿಗಳಿಗೆ ನುಗ್ಗಿದೆ.
Related Articles
Advertisement
ಪಡೀಲ್ ಅಂಡರ್‌ಪಾಸ್‌ನಲ್ಲಿ ನೀರು ತುಂಬಿದ್ದು, ವಾಹನಗಳು ನಿಧಾನವಾಗಿ ಚಲಿಸುತ್ತಿವೆ. ಕೊಡಿಯಾಲಬೈಲ್ ಅಕ್ಕಪಕ್ಕದ ಕೆಲವು ಭಾಗಗಳಲ್ಲಿ ಚರಂಡಿ ತುಂಬಿ ರಸ್ತೆಯಲ್ಲಿ ನೀರು ಹರಿದಿದೆ. ತಡರಾತ್ರಿ ವರೆಗೂ ಮಳೆ ಮುಂದುವರಿದಿತ್ತು.
ಮತ್ತಷ್ಟು ಮಳೆ ಸಂಭವ ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕರಾವಳಿ ಸಹಿತ ರಾಜ್ಯದ ವಿವಿಧೆಡೆ ರವಿವಾರವೂ ಗುಡುಗು ಸಹಿತ ಮಳೆ ಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 3 ವಿಮಾನ ಇಳಿಯದೆ ವಾಪಸ್ ಬೆಂಗಳೂರಿಗೆ
ಮಂಗಳೂರಿಗೆ ಶನಿವಾರ ಸಂಜೆ 7 ಗಂಟೆಯಿಂದ ರಾತ್ರಿ 9ರ ನಡುವೆ ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರಿನಿಂದ ಆಗಮಿಸಿದ 3 ವಿಮಾನಗಳು ಮಳೆ ಕಾರಣ ಇಳಿಯಲಾಗದೆ ಬೆಂಗಳೂರಿಗೆ ವಾಪಸಾಗಿವೆ. ಪರಿಸ್ಥಿತಿ ಯಥಾ ಸ್ಥಿತಿಗೆ ಮರಳಿದರೆ ತಡರಾತ್ರಿ ಈ ವಿಮಾನಗಳು ಮಂಗಳೂರಿಗೆ ಹಿಂದಿರುಗುವ ಸಾಧ್ಯತೆ ಇದೆ. ಇಲ್ಲದಿದ್ದರೆ ರವಿವಾರ ಬರಲಿವೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಶಾರದೆ ವಿಸರ್ಜನೆಗೂ ಸಮಸ್ಯೆ
ಮಂಗಳೂರು ರಥಬೀದಿಯ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ವಸಂತ ಮಂಟಪದಲ್ಲಿ 99ನೇ ವರ್ಷದ ಶಾರದ ಮಹೋತ್ಸವದಲ್ಲಿ ಪೂಜಿಸಿದ ಶಾರದಾ ಮಾತೆಯ ವಿಸರ್ಜನಾ ಮೆರವಣಿಗೆ ಶನಿವಾರ ರಾತ್ರಿ ಜರಗಿತು. ಭಾರೀ ಮಳೆಯಿಂದಾಗಿ ಮೆರವಣಿಗೆ ವಿಳಂಬವಾಗಿ ಸಾಗಿತು.