Advertisement
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಮಳೆ ಬಿರುಸು ಪಡೆದುಕೊಂಡಿದ್ದು, ಕೆಲವು ಕಡೆಗಳಲ್ಲಿ ಹಾನಿ ಸಂಭವಿಸಿದೆ. ಗ್ರಾಮಾಂತರ ಪ್ರದೇಶದ ವಿವಿಧೆಡೆ ಕೃಷಿ ಪ್ರದೇಶಗಳಿಗೆ ಮತ್ತು ಕೆಲವು ಮನೆಗಳಿಗೆ ನೆರೆ ನೀರು ನುಗ್ಗಿದೆ. ಹಲವು ಮನೆಗಳ ಮೇಲೆ ಗಾಳಿಯಿಂದ ಮರ ಬಿದ್ದು ಹಾನಿ ಸಂಭವಿಸಿದೆ.
Related Articles
ಮಂಗಳೂರಿನ ದೇರೆಬೈಲ್ ಬಳಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಮಂಗಳೂರು ನಗರದಲ್ಲಿ ಬಿಟ್ಟು ಬಿಟ್ಟು ಮಳೆ ಸುರಿದಿದೆ. ನಗರದ ಹೊರವಲಯದ ಅಡ್ಯಾರ್ ಬಳಿ ಒಳ ರಸ್ತೆಯಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಮನೆಯೊಂದಕ್ಕೆ ನೀರು ನುಗ್ಗಿದೆ.
Advertisement
ಮೂರು ದಿನ “ಆರೆಂಜ್ ಅಲರ್ಟ್’ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಜು. 5 ರಿಂದ 7ರವರೆಗೆ “ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಈ ವೇಳೆ ಬಿರುಸಿನ ಗಾಳಿ-ಮಳೆಯಾಗುವ ಸಾಧ್ಯತೆ ಇದೆ. ಮಳೆಯ ಹಿನ್ನಲೆಯಲ್ಲಿ ಗರಿಷ್ಠ ಉಷ್ಣಾಂಶ ಕಡಿಮೆಯಾಗಿದ್ದು, 25.3 ಡಿ.ಸೆ. ದಾಖಲಾಗಿ ವಾಡಿಕೆಗಿಂತ 3.8 ಡಿ.ಸೆ. ಕಡಿಮೆ ಮತ್ತು 22.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.5 ಡಿ.ಸೆ. ಕಡಿಮೆ ಇತ್ತು. ಉಡುಪಿ ಜಿಲ್ಲೆ: 53 ಮನೆಗಳಿಗೆ ಹಾನಿ
ಉಡುಪಿ: ಜಿಲ್ಲಾದ್ಯಂತ ಕಳೆದ ಎರಡು ದಿನಗಳಿಂದ ವ್ಯಾಪಕ ಮಳೆಯಾಗಿದ್ದು, ಗಾಳಿ ಮಳೆಗೆ 53 ಮನೆಗಳಿಗೆ ಮತ್ತು ಕೃಷಿ ಭೂಮಿಗೆ ಹಾನಿ ಸಂಭವಿಸಿದೆ. ಜಿಲ್ಲೆಯ ಸೌಪರ್ಣಿಕಾ, ಎಡಮಾವಿನ ಹೊಳೆ, ಚಕ್ರ, ಕುಬj ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ನೆರೆ ಸೃಷ್ಟಿಸಿವೆ. ಕುಂದಾಪುರ, ಬೈಂದೂರು, ಬ್ರಹ್ಮಾವರ, ಹೆಬ್ರಿ ತಾಲೂಕಿನ ವಿವಿಧೆಡೆ ನೆರೆ ನೀರು ಮನೆಗಳಿಗೆ ನುಗ್ಗಿದೆ. ಕೆಲವು ಕಡೆ ರಸ್ತೆ ಮೇಲೆ ನೀರು ಹರಿದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದುದರಿಂದ ಹಲವು ಸಮಯ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಅಂಗನವಾಡಿ ಮೇಲೆ ಮರ ಬಿದ್ದು ಹಾನಿ
ಕಾರ್ಕಳ ತಾಲೂಕಿನ ಕುಕ್ಕುಂದೂರು ಅಯ್ಯಪ್ಪ ನಗರ ಅಂಗನವಾಡಿ ಕೇಂದ್ರದ ಮೇಲೆ ಜು.3ರಂದು ಸಂಜೆ 4.45ರ ವೇಳೆ ಭಾರೀ ಗಾತ್ರದ ಮರ ಉರುಳಿ ಬಿದ್ದಿದೆ. ಮಕ್ಕಳು ಮನೆಗೆ ಹೋಗಿಯಾಗಿದ್ದರಿಂದ ಹೆಚ್ಚಿನ ಅಪಾಯವಾಗಿಲ್ಲ. ಕಟ್ಟಡಕ್ಕೆ ಹಾನಿಯಾಗಿದೆ.
ಗುರುವಾರ ಮಣಿಪಾಲ, ಮಲ್ಪೆ, ಉಡುಪಿ, ಕಾಪು ಸುತ್ತಮುತ್ತ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ. ಕುಂದಾಪುರ, ಬೈಂದೂರು, ಬ್ರಹ್ಮಾವರ ಅಧಿಕ ಮಳೆಯಾಗಿ ಹೆಚ್ಚು ಹಾನಿ ಸಂಭವಿಸಿದೆ. ಗಾಳಿ ಮಳೆಗೆ 130 ವಿದ್ಯುತ್ ಕಂಬ, 10 ವಿದ್ಯುತ್ ಪರಿವರ್ತಕ, 2.08 ಕಿ. ಮೀ. ವಿದ್ಯುತ್ ತಂತಿಗೆ ಹಾನಿ ಸಂಭವಿಸಿದ್ದು, ಮೆಸ್ಕಾಂಗೆ 21.72 ಲಕ್ಷ ರೂ. ಹಾನಿಯಾಗಿದೆ. ಕಾರ್ಕಳ 111.4, ಕುಂದಾಪುರ 191.0, ಉಡುಪಿ 87.2, ಬೈಂದೂರು 135.1, ಬ್ರಹ್ಮಾವರ 113.9, ಕಾಪು 38.5 ಮಿ. ಮೀ. ಹೆಬ್ರಿ 140.5 ಮಿ. ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ 132.5 ಮಿ. ಮೀ. ಸರಾಸರಿ ಮಳೆಯಾಗಿದೆ. ಉಡುಪಿ: 3 ತಾಲೂಕುಗಳಲ್ಲಿ
ಶಾಲೆ, ಕಾಲೇಜುಗಳಿಗೆ ರಜೆ
ಕುಂದಾಪುರ: ಮಳೆ ಹಿನ್ನೆಲೆಯಲ್ಲಿ ಕುಂದಾಪುರ, ಬ್ರಹ್ಮಾವರ, ಬೈಂದೂರು ತಾಲೂಕಿನ ಅಂಗನವಾಡಿಯಿಂದ ಪಿಯುಸಿ ವರೆಗಿನ ಕಾಲೇಜುಗಳಿಗೆ ಜು.5 ಶುಕ್ರವಾರ ರಜೆ ಘೋಷಿಸಿ ಸಹಾಯಕ ಕಮಿಷನರ್ ಆದೇಶ ಹೊರಡಿಸಿದ್ದಾರೆ. ಪದವಿ, ಸ್ನಾತಕೋತ್ತರ, ಐಟಿಐಗಳಿಗೆ ರಜೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.