ಸಂಕೇಶ್ವರ: ಮಹಾರಾಷ್ಟ್ರದಲ್ಲಿ ಹಾಗೂ ಜಿಲ್ಲೆಯ ಗಡಿ ಭಾಗದಲ್ಲಿ ಸತತ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಗುರುವಾರ ರಾತ್ರಿ ಸಂಕೇಶ್ವರ ನಗರಕ್ಕೆ ನೀರು ನುಗ್ಗಿದೆ.
ಶುಕ್ರವಾರ(ಜು.23) ಬೆಳಿಗ್ಗೆ ಜಿಲ್ಲಾಧಿಕಾರಿ ಎಮ್.ಜಿ.ಹಿರೇಮಠ ಅವರು ಪ್ರವಾಹ ಉಂಟಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಪ್ರವಾಹ ಸಂತ್ರಸ್ತರಿಗೆ ಎಲ್ಲ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸದ್ಯ ನಿರಾಶ್ರಿತರಗಾಗಿ ನಗರದಲ್ಲಿ 5 ಗಂಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಮಠ ಗಲ್ಲಿ, ನದಿ ಗಲ್ಲಿ, ಜನತಾ ಪ್ಲಾಟ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿನ ಮನೆಗಳಿಗೆ ಗುರುವಾರ ತಡರಾತ್ರಿ ನೀರು ನುಗ್ಗಿದೆ. ಈ ಹಿನ್ನಲೆಯಲ್ಲಿ ರಾತ್ರಿ ಇಡಿ ಸಂಕೇಶ್ವರ ಪುರಸಭೆ ಮುಖ್ಯಾಧಿಕಾರಿ ಜಗದೀಶ್ ಈಟಿ ಹಾಗೂ ಪಿಎಸ್ ಐ ಗಣಪತಿ ಕುಂಗನೋಳಿ ಅವರು ನಿರಾಶ್ರಿತರನ್ನು ಬೇರೆಡೆಗೆ ಸ್ಥಳಾಂತರಿಸಲು ಶ್ರಮ ವಹಿಸಿದ್ದಾರೆ. ಮನೆಗಳಿಗೆ ನುಗ್ಗಿದ ನೀರಿನಿಂದ ನಿರಾಶ್ರಿತರಾಗಿರುವ ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ಇಂದೂ ಮುಂದುವರಿದಿದ್ದು, 5 ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
ಸಂಕೇಶ್ವರ ನಗರದ ಹೊರಗಡೆ ಹಾಯ್ದು ಹೋಗಿರುವ ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೂ ಹಿರಣ್ಯಕೇಶಿ ನದಿಯ ನೀರು ಹರಿಯತೊಡಗಿದೆ. ಇದರಿಂದ ಸಂಕೇಶ್ವರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬಂದಾಗುವ ಸಾಧ್ಯತೆ ಇದೆ.