ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವೆಂಬಂತೆ, ಆಂಧ್ರಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯು ಹಲವು ಮನೆಗಳು, ಹೆದ್ದಾರಿಗಳನ್ನು ಮುಳುಗಿಸಿದೆ.
ಶ್ರೀಕಾಕುಲಂನಲ್ಲಿ ವಸತಿ ಕಾಲೊನಿಗಳು, ಹೆದ್ದಾರಿಗಳು, ಕಾರುಗಳು ಮುಳುಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ನೀರಲ್ಲಿ ಮುಳುಗಿರುವ ಕಾರೊಂದನ್ನು ಜನರೆಲ್ಲ ಸೇರಿ ಹೊರಗೆಳೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಒಡಿಶಾದಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದ್ದು, ಬುಧವಾರವೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇನ್ನು, ಮುಂಬೈ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದೆ. ರಾಯಗಡ, ರತ್ನಗಿರಿ ಮತ್ತು ಸತಾರಾ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ, ಈ ಮೂರೂ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.