ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಭಾರಿ ಮಳೆಯಾಗುತ್ತಿದೆ. ವರುಣನ ಆರ್ಭಟಕ್ಕೆ ರಾಜಧಾನಿಯ ಜನತೆ ಕಂಗಾಲಾಗಿದೆ. ಭಾರಿ ಮಳೆ ಸುರಿದ ಪರಿಣಾಮ ರಸ್ತೆಯೊಂದು ಕುಸಿದು, ಮನೆಯೊಂದು ಕೊಚ್ಚಿಹೋದ ಘಟನೆ ರವಿವಾರ ನಡೆದಿದೆ.
ದಿಲ್ಲಿ, ಅಸ್ಸಾಂ, ಬಿಹಾರ, ಒರಿಸ್ಸಾ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕೋವಿಡ್ ಸೋಂಕಿನ ಆರ್ಭಟಕ್ಕೆ ನಲುಗಿದ್ದ ಜನತೆ ಈಗ ಮಳೆಯ ಆರ್ಭಟಕ್ಕೆ ತತ್ತರಿಸುತ್ತಿದ್ದಾರೆ.
ರಸ್ತೆಯಲ್ಲಿ ಮಳೆ ನೀರು ಚರಂಡಿಯಂತೆ ತುಂಬಿ ಹರಿಯುತ್ತಿದೆ. ಕಾರು, ಟ್ಯಾಕ್ಸಿ ವಾಹನಗಳು ನೀರಿನಲ್ಲಿ ಮುಳುಗುತ್ತಿದೆ. ದಿಲ್ಲಿಯಲ್ಲಿ ಮಳೆಯ ಕಾರಣದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಮಿಂಟೋ ಸೇತುವೆ ಬಳಿ ಒಬ್ಬರ ಶವ ಪತ್ತೆಯಾಗಿದೆ. ಮತ್ತೊಬ್ಬರು ಜಹಾಗಿರ್ ಪುರ ಪ್ರದೇಶದಲ್ಲಿ ಸಾವನ್ನಪ್ಪಿದ್ದಾರೆ.
ಮಳೆಯ ನೀರಿನ ರಭಸಕ್ಕೆ ರಸ್ತೆಯೊಂದು ಬಾಯ್ತೆರೆದಿದೆ. ಇದರ ಪಕ್ಕದಲ್ಲಿದ್ದ ಮನೆಯೊಂದು ಕುಸಿದು ಆ ಗುಂಡಿಯೊಳಗೆ ಬಿದ್ದಿದೆ. ಅಣ್ಣಾ ನಗರ ಸ್ಲಮ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇರದ ಕಾರಣ ಯಾವುದೇ ರೀತಿಯ ಜೀವಹಾನಿ ಸಂಭವಿಸಿಲ್ಲ ಎನ್ನಲಾಗಿದೆ.