Advertisement

ಕರಾವಳಿಯ ವಿವಿಧೆಡೆಗಳಲ್ಲಿ ಉತ್ತಮ ಮಳೆ

11:12 AM May 11, 2020 | sudhir |

ಮಂಗಳೂರು/ ಉಡುಪಿ/ ಕಾಸರಗೋಡು: ಬಂಗಾಲ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾದ ಪರಿಣಾಮ ಕರಾವಳಿ ಭಾಗದ ಅನೇಕ ಕಡೆಗಳಲ್ಲಿ ರವಿವಾರ ಅಪರಾಹ್ನ ಮಳೆಯಾಗಿದೆ.

Advertisement

ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ, ಗುರುವಾಯನಕೆರೆ, ದಿಡುಪೆ, ಧರ್ಮಸ್ಥಳ, ಇಳಂತಿಲ, ಪುತ್ತೂರಿನ ತಾಲೂಕಿನ ವಿವಿಧೆಡೆ ಗಾಳಿ, ಮಳೆಯಾಗಿದೆ. ಹಲವಾರು ಅಡಿಕೆ ಮರಗಳು, ಬಾಳೆ ಗಿಡ ಇತ್ಯಾದಿ ಧರಾಶಾಯಿಯಾಗಿವೆ. ಮಂಗಳೂರು ನಗರದಲ್ಲಿ ದಿನವಿಡೀ ಬಿಸಿಲು, ಸೆಕೆ ಇದ್ದು, ಸಂಜೆ ವೇಳೆಗೆ ಸಾಧಾರಣ ಮಳೆಯಾಗಿದೆ. ಸುಳ್ಯ, ಬಂಟ್ವಾಳ ತಾಲೂಕಿನ ಅನೇಕ ಕಡೆ ಸಂಜೆ ವೇಳೆ ಮಳೆಯಾಗಿದೆ.

ಸುಳ್ಯ ತಾಲೂಕಿನ ವಿವಿಧೆಡೆ ರವಿವಾರ ಸಂಜೆ 1 ತಾಸಿನಷ್ಟು ಮಳೆಯಾಗಿದೆ. ಮೇ 9ರಂದು ಸಂಜೆ ಸುರಿದ ಮಳೆ, ಗಾಳಿಗೆ ಪೆರುವಾಜೆ ಗ್ರಾಮದ ಕುಂಡಡ್ಕ ಮೊದಲಾದೆಡೆ ಹಲವು ಅಡಿಕೆ ತೋಟಗಳಿಗೆ ಹಾನಿ ಉಂಟಾಗಿತ್ತು.

ಮಣಿಪಾಲದಲ್ಲಿ ಸಂಜೆ 10 ನಿಮಿಷಗಳ ಕಾಲ ಮಳೆಯಾಗಿದೆ. ಕಾರ್ಕಳದಲ್ಲಿ ಮೋಡದ ವಾತಾವರಣವಿತ್ತು. ಜಿಲ್ಲೆಯ ಹಲವೆಡೆ ಸಣ್ಣ ಪ್ರಮಾಣದಲ್ಲಿ ಮಳೆಯಾದ ಬಗ್ಗೆ ವರದಿಯಾಗಿದೆ. ಬಹುತೇಕ ಕಡೆಗಳಲ್ಲಿ ಸಂಜೆ ಬಳಿಕ ಮೋಡದಿಂದ ಕೂಡಿದ ವಾತಾವರಣವಿತ್ತು.

ಕಾಸರಗೋಡಿನಲ್ಲಿ
ಕಾಸರಗೋಡು ಜಿಲ್ಲೆಯ ವಿವಿಧೆಡೆ ರವಿವಾರ ಅಪರಾಹ್ನ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಕಾಸರಗೋಡು, ಬದಿಯಡ್ಕ, ಪೆರ್ಲ ಮೊದಲಾದೆಡೆ ಸಾಧಾರಣ ಮಳೆಯಾದರೆ, ವಾಣಿನಗರ, ಚೇವಾರು, ಬೋವಿಕ್ಕಾನ, ಕುಂಬಳೆ, ಉಪ್ಪಳ ಉತ್ತಮ ಮಳೆಯಾಗಿದೆ.

Advertisement

ಯಳಜಿತ್‌ನಲ್ಲಿ ಬಿರುಗಾಳಿ
ಕುಂದಾಪುರ ತಾಲೂಕಿನ ಗೋಳಿಯಂಗಡಿ, ಕೊಲ್ಲೂರು, ಜಡ್ಕಲ್‌, ಬೆಳ್ವೆ, ಸಿದ್ದಾಪುರ, ಹೊಸಂಗಡಿ, ಯಡಮೊಗೆ, ಆಜ್ರಿ, ಅಂಪಾರು, ಅಮಾಸೆಬೈಲು, ಉಳ್ತೂರು – 74 ಮೊದಲಾದೆಡೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಯಳಜಿತ್‌ ಪರಿಸರದಲ್ಲಿ ಸುಳಿಗಾಳಿ ಬೀಸಿದ್ದು, ಗಿಡ-ಮರಗಳು ಮುರಿದಿವೆ. ಅದರ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹೆಬ್ರಿ ಹಾಗೂ ಸುತ್ತಮುತ್ತ ಗುಡುಗು ಸಹಿತ ಗಾಳಿ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next