Advertisement

ಜೇವರ್ಗಿಯಲ್ಲಿ ಧಾರಾಕಾರ ಮಳೆ-ತುಂಬಿದ ಹಳ್ಳ ಕೊಳ್ಳ

10:50 AM Sep 09, 2017 | Team Udayavani |

ಜೇವರ್ಗಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಗುರುವಾರ ಸುರಿದ ಧಾರಾಕಾರ ಮಳೆಯಿಂದ ವಿವಿಧೆಡೆ ಪ್ರವಾಹ ಉಂಟಾಗಿದೆ.

Advertisement

ಗುರುವಾರ ಸಂಜೆ 5:30 ಗಂಟೆಗೆ ಆರಂಭವಾದ ಗುಡುಗು ಸಿಡಿಲು ಸಹಿತ ಮಳೆ ಸುಮಾರು ಮೂರು ಗಂಟೆಗಳ ಕಾಲ ಧಾರಾಕಾರವಾಗಿ ಸುರಿಯಿತು. ಇದರಿಂದ ರಸ್ತೆಗಳು ನೀರಿನಲ್ಲಿ ಮುಳುಗುವಂತಾಯಿತು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಆವಾಂತರ ಸೃಷ್ಟಿಯಾಗಿತ್ತು.

ಪಟ್ಟಣದ ಅಖಂಡೇಶ್ವರ ವೃತ್ತದ ಬಳಿ ಮರಗೋಳ ಕಾಂಪ್ಲೆಕ್ಸ್‌ ಒಳಗೆ ನೀರು ನುಗ್ಗಿದ ಪರಿಣಾಮ ಅಗ್ನಿಶಾಮಕ ವಾಹನದ ಸಹಾಯದಿಂದ ನೀರು ಹೊರ ಹಾಕಲಾಯಿತು. ರಸ್ತೆಗಳಲ್ಲಿ ಚರಂಡಿ ನೀರು ಶೇಖರಣೆಗೊಂಡು ವಾಹನ ಸವಾರರು, ಮಹಿಳೆಯರು, ಮಕ್ಕಳು, ವೃದ್ಧರು ಪರದಾಡುವಂತಾಯಿತು. ಶಾಲೆ ಬಿಡುವ ಸಮಯದಲ್ಲೇ ಮಳೆ ಆರಂಭವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ರಾತ್ರಿ 8:00 ಗಂಟೆವರೆಗೆ ಶಾಲೆಯಲ್ಲೇ ಇರುವಂತಾಯಿತು. ಕೆಲವು ಪಾಲಕರು ಮಳೆಯಲ್ಲೇ ತಮ್ಮ ಮಕ್ಕಳನ್ನು ಕರೆದುಕೊಂಡು ಹೋದರು.

ಮಳೆಯ ರಭಸಕ್ಕೆ ಪಟ್ಟಣದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿಯ ಹಳ್ಳದ ಸೇತುವೆ ಕುಸಿದು
ವಿದ್ಯಾರ್ಥಿಗಳು, ಲೋಕೋಪಯೋಗಿ ಸಿಬ್ಬಂದಿ ಹಾಗೂ ವಸತಿಗೃಹದಲ್ಲಿರುವ ಜನತೆ ಪರದಾಡುವಂತಾಯಿತು.

ಸೇತುವೆ ಗುರುವಾರ ರಾತ್ರಿ 7ಗಂಟೆ ಸುಮಾರಿಗೆ ಕುಸಿದಿದ್ದರಿಂದ ಜನರು ಮನೆಗಳಿಗೆ ಹೋಗದೆ ರಾತ್ರಿಯಿಡಿ ದೇವಸ್ಥಾನ ಹಾಗೂ ಗೆಳೆಯರ ಮನೆಗಳಲ್ಲಿ ವಾಸ್ತವ್ಯ ಮಾಡುವಂತಾಯಿತು. ಶುಕ್ರವಾರ ಮಧ್ಯಾಹ್ನ ಪ್ರವಾಹ ಕಡಿಮೆಯಾದ ಮೇಲೆ ಮನೆಗಳಿಗೆ ತೆರಳಿದರು.

Advertisement

ಅಲ್ಲದೇ ದತ್ತನಗರ ಹಾಗೂ ಚಿಕ್ಕಜೇವರ್ಗಿ ಬಡಾವಣೆಗೆ ತೆರಳುವ ರಸ್ತೆ ಸಂಪೂರ್ಣ ಜಲಾವೃತಗೊಂಡು ನಿವಾಸಿಗಳು ಮನೆ ಬಿಟ್ಟು ಹೊರಬಾರದಂತಾಗಿತ್ತು. ಪಟ್ಟಣದ ಶಾಂತನಗರ, ವಿದ್ಯಾನಗರ, ಓಂ ನಗರ, ಲಕ್ಕಪ್ಪ ಲೇಔಟ್‌ ಬಡಾವಣೆ ಸೇರಿದಂತೆ ಅನೇಕ ಕಡೆ ಚರಂಡಿ ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ತೊಂದರೆಯಾಯಿತು.

ಗ್ರಾಮೀಣ ಭಾಗದಲ್ಲೂ ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ತಾಲೂಕಿನ ಹರವಾಳ ಕ್ರಾಸ್‌ ಹತ್ತಿರ ರಾತ್ರಿ ರಾಷ್ಟ್ರೀಯ ಹೆದ್ದಾರಿ 218ರ ಮೇಲೆ ಸೇತುವೆ ಜಲಾವೃತಗೊಂಡು ಟ್ರಾಫಿಕ್‌ ಜಾಮ್‌ ಆಗಿ ಪರದಾಡುವಂತಾಯಿತು. ಹಲವು ಗ್ರಾಮಗಳಲ್ಲಿ ವಿದ್ಯುತ್‌ ಕಂಬ ಉರುಳಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದರೆ, ರಸ್ತೆಗಳು ಕಿತ್ತುಕೊಂಡು ಹೋಗಿವೆ.
ಗಿಡಮರಗಳು ಉರುಳಿ ಬಿದ್ದಿವೆ. 

ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ಇಂತಹ ಮಳೆ ಸುರಿದಿರಲಿಲ್ಲ, ಈಗಾಗಲೇ ಅಗತ್ಯದಷ್ಟು ಮಳೆಯಾಗಿದ್ದು, ಬೆಳೆಗಳಿಗೆ ಸಾಕಾಗಿದೆ. ಆದರೆ ಮಳೆ ಇದೇ ರೀತಿ ಮುಂದುವರಿದರೆ ಬೆಳೆಗಳಿಗೆ ತೊಂದರೆಯಾಗುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next