Advertisement

Heavy Rain: ಉತ್ತರ ಕರ್ನಾಟಕದಲ್ಲಿ ಮತ್ತೆ ನೆರೆ ಭೀತಿ

01:35 AM Jul 25, 2024 | Team Udayavani |

ಹುಬ್ಬಳ್ಳಿ/ಬೆಂಗಳೂರು: ಎಡೆಬಿಡದೆ ಸುರಿಯುತ್ತಿರುವ ಪುಷ್ಯ ಮಳೆಯಿಂದ ಕೃಷ್ಣಾ, ದೂಧಗಂಗಾ, ವೇದಗಂಗಾ, ತುಂಗಭದ್ರಾ, ವರದಾ ನದಿಗಳು ಅಪಾಯದ ಮಟ್ಟ ಮೀರಿ ಆರ್ಭಟಿಸುತ್ತಿವೆ. ಮುಂಜಾಗ್ರತೆ ಕ್ರಮವಾಗಿ ನದಿ ತೀರದಲ್ಲಿ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಮಳೆ ಅನಾಹುತಕ್ಕೆ ಮೂವರು ಮೃತಪಟ್ಟಿದ್ದಾರೆ.

Advertisement

ಯಲ್ಲಾಪುರ ತಾಲೂಕಿನ ಕಬ್ಬಿನಗದ್ದೆಯ ವಿನಯ ಮಂಜುನಾಥ ಗಾಡಿಗ (25) ಮರ ಬಿದ್ದು ಮೃತಪಟ್ಟಿದ್ದಾರೆ. ಮುಂಡಗೋಡ ತಾಲೂಕಿನ ಮಳಗಿ ಧರ್ಮಾ ಡ್ಯಾಂನಲ್ಲಿ ಈಜಲು ಹೋಗಿದ್ದ ಮುಡಸಾಲಿ ಗ್ರಾಮದ ಶ್ರೀಕಾಂತ ಹರಿಜನ (20) ನೀರು ಪಾಲಾಗಿದ್ದರೆ ಮುದ್ದೇಬಿಹಾಳ ತಾಲೂಕಿನ ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಕಾಲು ಜಾರಿ ಬಿದ್ದಿದ್ದ ಕುರಿಗಾಹಿ ಮಂಜುನಾಥ ಮಾದರ (28) ಮೃತದೇಹ ಯಾದಗಿರಿ ಜಿಲ್ಲೆ ಹೊರಟ್ಟಿ ಗ್ರಾಮದ ಕಾಲುವೆಯಲ್ಲಿ ಬುಧವಾರ ದೊರಕಿದೆ.

ಬೆಳಗಾವಿ ಜಿಲ್ಲೆಯಲ್ಲಿ 22, ಮಹಾಲಿಂಗಪುರ ತಾಲೂಕಿನಲ್ಲಿ 3 ಸೇತುವೆಗಳು ಮುಳುಗಡೆಯಾಗಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ನದಿ ತೀರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳು ಜನವಸತಿ ಪ್ರದೇಶಗಳಿಗೆ ನುಗ್ಗಿದೆ.

ಮೂಡಲಗಿ ತಾಲೂಕಿನ ಘಟಪ್ರಭಾ ನದಿ ಪಾತ್ರದ ಗ್ರಾಮಗಳ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಿದೆ. ಬೆಳಗಾವಿ ಜಿಲ್ಲೆಯಲ್ಲಿ 427 ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಬೋಟ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ 2.02 ಲಕ್ಷ ಕ್ಯೂಸೆಕ್‌ ನೀರು ಹರಿಬಿಟ್ಟಿದ್ದರಿಂದ ಗಡ್ಡೆಗೊಳ್ಳಿ ಬಸವೇಶ್ವರ ದೇವಸ್ಥಾನ ಮುಳಗಿದೆ.

ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆಯಾಗಿರುವುದರಿಂದ ಕೆಆರ್‌ಎಸ್‌ ಜಲಾಶಯ ಪೂರ್ಣ ಭರ್ತಿಯಾಗಿದೆ. ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಮೂಲ ಸೌಕರ್ಯಗಳಿಗೆ ಹಾನಿ ಮತ್ತು ಬೆಳೆಹಾನಿ ಸಂಭವಿಸುತ್ತಿದೆ. ಶಿರಾಡಿಘಾಟ್‌ನಲ್ಲಿ ಭೂ ಕುಸಿತ ಭೀತಿಯಿದೆ. ಇದರಿಂದ ವಾಹನ ಸವಾರರು ಭಯದಿಂದಲೇ ಓಡಾಡುವಂತಾಗಿದೆ.

Advertisement

ಉತ್ತರ ಕನ್ನಡದಲ್ಲಿ ನಿಲ್ಲದ ಭೂಕುಸಿತ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಜತೆ ಗಾಳಿಯೂ ಜೋರಾ ಗಿದೆ. ಶಿರಸಿ-ಮತ್ತಿಘಟ್ಟ ಮಾರ್ಗವಾಗಿ ಅಂಕೋಲಾಕ್ಕೆ ತೆರಳುವ ಮಾರ್ಗದಲ್ಲಿ ಭೂಕುಸಿತವಾಗಿ ಸಂಚಾರ ಸ್ಥಗಿತವಾಗಿದೆ. ಹಲವೆಡೆ ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ಅಘನಾಶಿನಿ, ಗಂಗಾವಳಿ, ವರದಾ ಉಕ್ಕೇರಿದ್ದು, ತೀರ ಪ್ರದೇಶದಲ್ಲಿ ನೆರೆ ಭೀತಿ ಎದುರಾಗಿದೆ. ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮಳೆ ಕಡಿಮೆಯಾದರೂ ನದಿಗಳ ಅಬ್ಬರ ಇನ್ನೂ ತಗ್ಗಿಲ್ಲ.

ಕೆಆರ್‌ಎಸ್‌ ಗೇಟ್‌ ಮುಂದಿನ ತಡೆಗೋಡೆ ಕುಸಿತ
ಮಂಡ್ಯ: ಕೃಷ್ಣರಾಜಸಾಗರ ಜಲಾಶಯದಿಂದ ಕಾವೇರಿ ನದಿಗೆ ನೀರು ಹರಿಸುವ ಗೇಟ್‌ಗಳ ಮುಂಭಾಗದಲ್ಲಿದ್ದ ತಡೆಗೋಡೆ ಕುಸಿದಿದೆ. ಜಲಾಶಯದ ಬಳಿಯ ನಗುವನ ತೋಟಕ್ಕೆ ನೀರು ನುಗ್ಗದಂತೆ ತಡೆಗೋಡೆ ನಿರ್ಮಿಸಲಾಗಿತ್ತು. ಇತ್ತೀಚೆಗಷ್ಟೇ ಮತ್ತೆ ನವೀಕರಿಸಲಾಗಿತ್ತು. ಆದರೆ ನೀರಿನ ರಭಸಕ್ಕೆ ತಡೆಗೋಡೆ ಕೊಚ್ಚಿ ಹೋಗಿದೆ.

Advertisement

Udayavani is now on Telegram. Click here to join our channel and stay updated with the latest news.

Next