ಬೆಂಗಳೂರು: ರಾಜ್ಯ ರಾಜಧಾನಿ, ಸಿಲಿಕಾನ್ ವ್ಯಾಲಿ ಬೆಂಗಳೂರು ನಗರದಲ್ಲಿ ಭಾನುವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಜನರು ಪರದಾಡುವಂತಾಗಿದೆ. ರಸ್ತೆ ಮೇಲೆ ನೀರು ನಿಂತ ಕಾರಣ ದ್ವಿಚಕ್ರ ವಾಹನ ಸವಾರರು, ದಾರಿಹೋಕರು ಕಷ್ಟ ಪಟ್ಟರು. ಹಲವು ಬಡಾವಣೆಗಳಿಗೆ ನೀರು ನುಗ್ಗಿದ್ದು, ಜನರು ಆಡಳಿತ ವರ್ಗಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಕಳೆದೊಂದು ವಾರ ಸುರಿದ ಮಳೆಯಿಂದಾಗಿ ನಗರದ ಅರ್ಧಕ್ಕೂ ಹೆಚ್ಚಿನ ಬಡಾವಣೆಗಳು ಜಲಾವೃತವಾಗಿದ್ದವು. ಕಳೆದೆರಡು ದಿನಗಳ ಕಾಲ ಮಳೆಯ ಪ್ರಮಾಣ ಕಡಿಮೆಯಾಗಿ ಜನರು ನಿಟ್ಟುಸಿರು ಬಿಡುವಂತಾಗಿದೆ. ಆದರೆ, ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಪ್ರವಾಹ ತಗ್ಗಿದ್ದ ಬಡಾವಣೆಗಳಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ. ಅಲ್ಲದೆ, ಬೆಳ್ಳಂದೂರು ರಸ್ತೆ ಸೇರಿ ಹೊರವರ್ತುಲ ರಸ್ತೆಯಲ್ಲಿ ನೀರಿನ ಪ್ರಮಾಣ ಮತ್ತೆ ಹೆಚ್ಚುವಂತಾಗಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ತೊಡಕಾಗುವಂತಾಗಿದೆ.
ಇದನ್ನೂ ಓದಿ:ರೀಲ್ಸ್ ಮಾಡಲು ಹೋಗಿ ಯುವಕನ ಹುಚ್ಚಾಟ : ರೈಲು ಢಿಕ್ಕಿ ಹೊಡೆದು ಯುವಕನಿಗೆ ಗಂಭೀರ ಗಾಯ..
ಕಳೆದ ವಾರ ಮಳೆ ನೀರಿಗೆ ನದಿಯಂತಾಗಿ ರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಒಳಗಾಗಿದ್ದ ಸರ್ಜಾಪುರ ರಸ್ತೆಯಲ್ಲಿ ಮತ್ತೆ ಅದೇ ಪರಿಸ್ಥಿತಿ. ಮಾರತಹಳ್ಳಿ- ಸಿಲ್ಕ್ ಬೋರ್ಡ್ ಜಂಕ್ಷನ್ ರಸ್ತೆ, ಹೊಸುರು ರಸ್ತೆ, ಕೋರಮಂಗಲ, ಸರ್ಜಾಪುರ ಸೇರಿದಂತೆ ಹಲವೆಡೆ ರಸ್ತೆಯಲ್ಲಿ ನೀರು ತುಂಬಿ ಸಂಚಾರ ಎನ್ನುವುದು ದೇವರಿಗೆ ಪ್ರೀತಿ ಎನ್ನುವಂತಾಗಿದೆ.
ಕೆಲವು ಪ್ರೀಮಿಯಂ ಸೊಸೈಟಿಗಳು ಸಹ ಮೊದಲ ಬಾರಿಗೆ ನೆರೆ ಸಂಕಷ್ಟವನ್ನು ಎದುರಿಸುತ್ತಿವೆ. ನಿವಾಸಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಹಾಯವನ್ನು ಕೋರಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿರುವ ಟೆಕ್ ಪಾರ್ಕ್‌ಗಳಿಗೆ ನಗರವನ್ನು ಸಂಪರ್ಕಿಸುವ ಹೊರ ವರ್ತುಲ ರಸ್ತೆಯಲ್ಲಿ ಟ್ರಾಫಿಕ್ ಹೆಚ್ಚಾಗಿ ಪರಿಣಾಮ ಬೀರಿದೆ. ಸೋಮವಾರವಾದ ಕಾರಣ ಸಮಯಕ್ಕೆ ಸರಿಯಾಗಿ ಕಚೇರಿ ತಲುಪಲಾಗದ ಉದ್ಯೋಗಿಗಳು ಕ್ಯಾಬ್ ನಲ್ಲಿ ಕುಳಿತೇ ವ್ಯವಸ್ಥೆಗೆ ದೂರುತ್ತಿರುವ ದೃಶ್ಯಗಳೂ ಕಂಡು ಬಂತು.