ಹುಬ್ಬಳ್ಳಿ: ಉತ್ತರ ಕರ್ನಾಟಕದ 8 ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಮತ್ತೆ ಜೋರಾಗಿದ್ದು, ಸಿಡಿಲಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಬಿರುಗಾಳಿಗೆ ಹಲವೆಡೆ ಮರ, ವಿದ್ಯುತ್ ಕಂಬ
ಗಳು ಧರೆಗುರುಳಿವೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಹಾವೇರಿ ತಾಲೂಕು ಕುರುಬಗೊಂಡ ಗ್ರಾಮದಲ್ಲಿ ದಯಾನಂದ ಪುಟ್ಟನಗೌಡ್ರ (20) ಹೊಲದಲ್ಲಿ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶಿಗ್ಗಾವಿ ತಾಲೂಕಿನಲ್ಲಿ ಗಾಳಿ ಸಹಿತ ಮಳೆಗೆ ವಿವಿಧೆಡೆ ಮನೆಯ ಮೇಲ್ಛಾವಣಿಗೆ ಹೊದಿಸಿದ್ದ ತಗಡು, ಹಂಚುಗಳು ಗಾಳಿಗೆ ಹಾರಿಹೋಗಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಹಿರೇಕೆರೂರು, ಬ್ಯಾಡಗಿ, ಹಾನಗಲ್ಲ ತಾಲೂಕಿನಲ್ಲೂ ಧಾರಾಕಾರ ಮಳೆಯಾಗಿದೆ.
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿ ಗಾಳಿ-ಮಳೆಗೆ ಸುಮಾರು 10ಕ್ಕೂ ಹೆಚ್ಚು ಎಕ್ರೆ ಬಾಳೆ ಬೆಳೆ ಹಾನಿಯಾಗಿದೆ.
ಬೆಳಗಾವಿ, ಗೋಕಾಕ, ನಿಪ್ಪಾಣಿ, ಸಾಂಬ್ರಾದಲ್ಲಿ ವಿವಿಧೆಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ಅಡಿಕೆ ಮರಗಳು ಉರುಳಿ ಬಿದ್ದಿವೆ. ಶಿವಮೊಗ್ಗ, ಧಾರವಾಡ, ಕೊಪ್ಪಳ, ಬಾಗಲಕೋಟೆಯಲ್ಲೂ ಧಾರಾಕಾರ ಮಳೆಯಾಗಿದೆ.