ದ.ಕ. ಜಿಲ್ಲೆಯ ಹಲವು ಕಡೆಗಳಲ್ಲಿ ಮಂಗಳವಾರ ಹಗಲಿನಲ್ಲಿ ಮತ್ತು ರಾತ್ರಿ ವೇಳೆ ಉತ್ತಮ ಮಳೆಯಾಗಿದೆ.
Advertisement
ಸುಳ್ಯ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಬೆಳಗ್ಗೆಯಿಂದಲೇ ಉತ್ತಮ ಮಳೆ ಸುರಿದಿದೆ. ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿಯೂ ಉತ್ತಮ ಮಳೆ ಸುರಿದಿದೆ. ಬಂಟ್ವಾಳ ತಾಲೂಕಿನ ವಿವಿಧೆಡೆ ಸೋಮವಾರ ರಾತ್ರಿ ಬಳಿಕ ಭಾರೀ ಮಳೆ ಸುರಿದಿದೆ. ಮಂಗಳವಾರ ಬೆಳಗ್ಗೆ 8.30ರ ವರೆಗಿನ ಹಿಂದಿನ 24 ತಾಸುಗಳಲ್ಲಿ ಮಾಣಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ ಎನಿಸಿದ 16 ಸೆಂ.ಮೀ. ಮಳೆ ಸುರಿದಿದೆ. ತಾಲೂಕಿನ ವಿವಿಧೆಡೆ ಮಂಗಳವಾರ ಹಗಲಿನಲ್ಲಿ ಕೂಡ ಉತ್ತಮ ಮಳೆಯಾಗಿದೆ. ಮಂಗಳೂರು ನಗರ ಪ್ರದೇಶಗಳಲ್ಲಿ ಬೆಳಗ್ಗೆ ಆರಂಭವಾದ ಮಳೆ ಮಧ್ಯಾಹ್ನ ವೇಳೆ ತುಸು ಬಿಡುವು ನೀಡಿತ್ತು. ರಾತ್ರಿ ಮತ್ತೆ ಉತ್ತಮ ಮಳೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ, ಮಂಗಳವಾರ ಧಾರಾಕಾರ ಮಳೆ ಸುರಿದಿದೆ. ಉಡುಪಿ, ಮಣಿಪಾಲ, ಮಲ್ಪೆ, ಕಾಪು, ಕಟಪಾಡಿ ಸುತ್ತಮುತ್ತ ಮಂಗಳವಾರ ಮಧ್ಯಾಹ್ನ ಬಳಿಕ ನಿರಂತರ ಮಳೆ ಸುರಿದಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸಾಧಾರಣ ಮಳೆಯಾಗಿತ್ತು. ಆದರೆ ಸಂಜೆಯ ವೇಳೆ ಬಿರುಸಾಗಿ ಮಳೆ ಸುರಿಯಲಾರಂಭಿಸಿತು. ಸೋಮವಾರ ರಾತ್ರಿ ಕೂಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ನಗರದಲ್ಲಿ ಚರಂಡಿ ಅವ್ಯವಸ್ಥೆಯಿಂದಾಗಿ ರಸ್ತೆ ಮೇಲೆ ನೀರು ಹರಿಯಿತು. ಲಕ್ಷ್ಮೀಂದ್ರ ನಗರ, ಇಂದ್ರಾಳಿ ಸೇತುವೆ ಬಳಿ ವಾಹನ ಸವಾರರು ಸಂಕಷ್ಟ ಅನುಭವಿಸಿದರು. ಕೃಷಿ ಭೂಮಿ, ತಗ್ಗು ಪ್ರದೇಶದಲ್ಲಿ ಕೃತಕ ನೆರೆ ಆವರಿಸಿದೆ.
Related Articles
ಕರಾವಳಿ ಭಾಗದಲ್ಲಿ ಮಳೆ ಮುಂದುವರಿಯುವ ನಿರೀಕ್ಷೆ ಇದ್ದು, ಭಾರತೀಯ ಹವಾಮಾನ ಇಲಾಖೆಯು ಆ. 24 ಮತ್ತು 25ನೇ ತಾರೀಖೀಗೆ “ಎಲ್ಲೋ ಅಲರ್ಟ್’ ಘೋಷಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಹಾಸನ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿಯೂ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement
ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಇರುವು ದರಿಂದ ಕೆಲವೊಮ್ಮೆ ರಭಸವಾಗಿ ಗಾಳಿ ಬೀಸುವ ಸಾಧ್ಯತೆ ಇರುತ್ತದೆ. ಮೀನುಗಾರರು ಎಚ್ಚರಿಕೆ ಯಿಂದ ಇರಬೇಕೆಂದು ಇಲಾಖೆ ತಿಳಿಸಿದೆ. ಆ. 25ರ ಬಳಿಕ ಮಳೆ ಕಡಿಮೆಯಾಗುವ ನಿರೀಕ್ಷೆ ಹೊಂದಲಾಗಿದೆ.