ಮಣಿಪಾಲ : ರವಿವಾರ ಸಂಜೆ ಕರಾವಳಿಯ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಭಾರೀ ಸೆಖೆಯನ್ನು ತಗ್ಗಿಸಿ ತಂಪನ್ನುಂಟು ಮಾಡಿದೆ.
ಕಳೆದ ಒಂದೆರಡು ದಿನಗಳಿಂದ ಕರಾವಳಿಯಲ್ಲಿ ಭಾರೀ ಸೆಖೆ ಇತ್ತು. ದಿನವಿಡೀ ಮೋಡ ಕವಿದ ವಾತಾವರಣ, ವಾತಾವರಣದಲ್ಲಿ ಹೆಚ್ಚಿರುವ ಆರ್ದ್ರತೆಯಿಂದಾಗಿ ತೀವ್ರ ಉರಿ, ಧಗೆ ಕಂಡುಬರುತ್ತಿತ್ತು.
ರವಿವಾರ ರಾತ್ರಿ ಉಡುಪಿ ಜಿಲ್ಲೆಯ ಕುಂದಾಪುರ, ಗಂಗೊಳ್ಳಿ; ದ.ಕ.ದ ಬೆಳ್ತಂಗಡಿ ಮೊದಲಾದೆಡೆ ಉತ್ತಮ ಮಳೆಯಾಗಿದೆ. ಗಂಗೊಳ್ಳಿಯ ಹಲವೆಡೆ ಗಾಳಿಯಿಂದಾಗಿ ಹಾನಿ ಉಂಟಾಗಿದೆ.
ಬಂಟ್ವಾಳ, ಕಡಬ, ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ, ಮುಂಡಾಜೆ, ಧರ್ಮಸ್ಥಳ, ಬೆಳ್ತಂಗಡಿ ಸಹಿತ ವಿವಿಧೆಡೆ ಗುಡುಗು ಮಿಂಚು ಸಹಿತ ಉತ್ತಮ ಮಳೆ ಬಂದಿದೆ. ಸುಳ್ಯದ ಬಳ್ಪ, ಕೇನ್ಯ, ಮಂಗಳೂರಿನಲ್ಲಿಯೂ ಉತ್ತಮ ಮಳೆಯಾಗಿದೆ. ಕೋಟೆಕಾರು, ತೊಕ್ಕೊಟ್ಟು ಪ್ರದೇಶದಲ್ಲಿ ಶನಿವಾರ ಮತ್ತು ರವಿವಾರ ಗುಡುಗು ಸಹಿತ ಉತ್ತಮ ಮಳೆ ಬಂದಿದೆ.
ಕುಂದಾಪುರ: ಭಾರೀ ಮಳೆ, ಹಾನಿ
ರವಿವಾರ ಸಂಜೆ ಕುಂದಾಪುರ ಹಾಗೂ ಬೈಂದೂರಿನಾದ್ಯಂತ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ. ಕುಂದಾಪುರ ನಗರದಲ್ಲಿ ವಾಹನ ಸವಾರರು ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಅಡಚಣೆಯಾಗಿತ್ತು. ಗಾಳಿ – ಮಳೆಯಿಂದಾಗಿ ಬಹುತೇಕ ಎಲ್ಲ ಕಡೆಗಳಲ್ಲಿ ಕೆಲ ಗಂಟೆಗಳ ಕಾಲ ವಿದ್ಯುತ್ ಕಡಿತಗೊಂಡಿತ್ತು.
ಕೋಟೇಶ್ವರ, ತೆಕ್ಕಟ್ಟೆ, ಬಸ್ರೂರು, ಕಂಡಲೂರು, ವಂಡ್ಸೆ, ಜಡ್ಕಲ್, ಸೆಳ್ಕೊಡು, ಮುದೂರು, ಕೊಲ್ಲೂರು, ಬೈಂದೂರು, ಶಿರೂರು, ಉಪ್ಪುಂದ, ನಾಗೂರು, ಕಿರಿಮಂಜೇಶ್ವರ, ನಾವುಂದ, ಮರವಂತೆ, ಆಲೂರು, ನಾಡ, ಗಂಗೊಳ್ಳಿ, ಹೆಮ್ಮಾಡಿ, ತಲ್ಲೂರು, ನೇರಳಕಟ್ಟೆ, ಸಿದ್ದಾಪುರ, ಹೊಸಂಗಡಿ, ಹಳ್ಳಿಹೊಳೆ, ಆಜ್ರಿ, ಹಾಲಾಡಿ, ಅಂಪಾರು, ಶಂಕರನಾರಾಯಣ, ಗೋಳಿಯಂಗಡಿ, ಬೆಳ್ವೆ, ಮಡಾಮಕ್ಕಿ, ಹೆಂಗವಳ್ಳಿ, ಅಮಾಸೆಬೈಲು, ಉಳ್ಳೂರು -74 ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ಎಲ್ಲೆಡೆ ಭಾರೀ ಮಿಂಚು, ಗುಡುಗು, ಗಾಳಿ ಸಹಿತ ಉತ್ತಮ ಮಳೆಯಾಗಿದೆ.
ತೆಂಗಿನಮರ ಬಿದ್ದು ಹಾನಿ
ಗಂಗೊಳ್ಳಿಯ ನೀರಿನ ಟ್ಯಾಂಕ್ ಬಳಿ ಸುಬ್ರಾಯ ಶೇರುಗಾರ್ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು, ಹಾನಿಯಾದ ಘಟನೆ ರವಿವಾರ ಸಂಜೆ ಸಂಭವಿಸಿದೆ. ಮನೆಯೊಳಗಿದ್ದವರು ಹೊರಗೆ ಓಡಿ ಪರಾಗಿದ್ದಾರೆ. ಮನೆ ಮೇಲೆ ಮರ ಬಿದ್ದ ಪರಿಣಾಮ ಟಿವಿ, ಇನ್ನಿತರ ವಸ್ತುಗಳು, ವಿದ್ಯುತ್ ಪರಿಕರಗಳಿಗೆ ಹಾನಿಯಾಗಿದ್ದು. ಜಾನುವಾರು ಕೊಟ್ಟಿಗೆಗೂ ಹಾನಿಯಾಗಿದೆ. ಹಲವೆಡೆಗಳಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳಿಗೂ ಹಾನಿಯಾಗಿದ್ದು, ವಿದ್ಯುತ್ ವ್ಯತ್ಯಯವಾಗಿದೆ.