Advertisement
ಮಂಗಳೂರು ನಗರದಲ್ಲಿ ಸಂಜೆ ಮಳೆ ಬಿರುಸು ಪಡೆದಿತ್ತು. ಕುಂಜತ್ತಬೈಲು ಬಳಿ ಮನೆಯೊಂದಕ್ಕೆ ಮರ ಬಿದ್ದು ಹಾನಿಯಾಗಿದೆ. ಮನೆಯ ಮಾಲಕ ಮತ್ತು ಮಹಿಳೆಯೊಬ್ಬರಿಗೆ ಗಾಯಗಳಾಗಿವೆ. ಉಡುಪಿ ಜಿಲ್ಲೆಯಾದ್ಯಂತ ಶನಿವಾರ ದಿನಪೂರ್ತಿ ಉತ್ತಮ ಮಳೆಯಾಗಿದೆ. ಕರಾವಳಿಯಾದ್ಯಂತ ಕಡಲಿನ ಅಬ್ಬರವೂ ಬಿರುಸುಗೊಂಡಿದೆ. ಬಂಗಾಲ ಕೊಲ್ಲಿಯಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತ ಮತ್ತು ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಜೂ. 15ರ ವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ಯನ್ನು ಐಎಂಡಿ ನೀಡಿದೆ.
ಬಿರುಗಾಳಿ ಮತ್ತು ಗುಡುಗು ಸಹಿತ ಭಾರೀ ಮಳೆ ವಾಣಿಜ್ಯ ನಗರಿಯನ್ನು ನಡುಗಿಸಿದೆ. ಶನಿವಾರ ಇಡೀ ದಿನ ಮುಂಬಯಿಯಲ್ಲಿ ಧಾರಾಕಾರ ಮಳೆಯಾಗಿದೆ. ಪರಿಣಾಮವಾಗಿ ಬಸ್ ಮತ್ತು ರೈಲು ಸಂಚಾರ ವ್ಯತ್ಯಯವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಮುಂದಿನ 2 ದಿನಗಳಿಗೆ ಮುಂಬಯಿಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಹಲವಾರು ರಸ್ತೆಗಳು ಜಲಾವೃತಗೊಂಡಿದ್ದು, ರೈಲು ಹಳಿಯಲ್ಲಿ ನೀರು ತುಂಬಿಕೊಂಡ ಕಾರಣ ದಾದರ್ ಮತ್ತು ಕುರ್ಲಾ ಸ್ಟೇಷನ್ ಗಳ ನಡುವಿನ ಸಬರ್ಬನ್ ರೈಲು ಸೇವೆಯನ್ನು ರದ್ದು ಮಾಡಲಾಗಿದೆ ಎಂದು ಕೇಂದ್ರ ರೈಲ್ವೇ ವಕ್ತಾರರು ತಿಳಿಸಿದ್ದಾರೆ. ಮುಂಬಯಿ, ಥಾಣೆ, ಪಾಲರ್, ರಾಯಗಢ, ರತ್ನಗಿರಿ ಜಿಲ್ಲೆಗಳಲ್ಲಿ ಸೋಮವಾರದವರೆಗೆ ಮಳೆ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.