Advertisement

ಬೆಂಗಳೂರು ಸಹಿತ ರಾಜ್ಯದ ಕೆಲವೆಡೆ ವರುಣಾಘಾತ: ಆರು ಮಂದಿ ಸಾವು

12:21 AM May 22, 2023 | sudhir |

ಬೆಂಗಳೂರು: ರಾಜಧಾನಿ ಬೆಂಗಳೂರು ಸಹಿತ ರಾಜ್ಯದ ಕೆಲವೆಡೆ ರವಿವಾರ ಧಾರಾಕಾರ ಮಳೆಯಾಗಿದ್ದು, ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ.

Advertisement

ಬೆಂಗಳೂರಿನ ಕೆ.ಆರ್‌.ವೃತ್ತದ ಬಳಿ ಜಲಾವೃತಗೊಂಡಿದ್ದ ಅಂಡರ್‌ಪಾಸ್‌ನೊಳಗೆ ಕಾರು ಮುಳುಗಿ ಯುವತಿ ಸಾವನ್ನಪ್ಪಿದ್ದಾರೆ. ರಾಜ್ಯದ ಇತರೆಡೆ ಮಳೆ ಸಂಬಂಧಿ ಘಟನೆಗಳಿಂದ ಐದು ಮಂದಿ ಸಾವಿಗೀಡಾಗಿದ್ದಾರೆ. ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಪ್ರಕಾರ ಇನ್ನೂ 2 ದಿನಗಳ ಕಾಲ ರಾಜ್ಯದ ಕೆಲವು ಕಡೆಗಳಲ್ಲಿ ಮಳೆ ಪ್ರಕೋಪ ಮುಂದುವರಿಯಲಿದೆ.

ಬೆಂಗಳೂರಿನಲ್ಲಿ ರವಿವಾರ 30 ಮಿ.ಮೀ. ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಇಡೀ ಸಿಲಿಕಾನ್‌ ಸಿಟಿಯೇ ಅಸ್ತವ್ಯಸ್ತವಾಗಿದೆ. ಇನ್ನು 50ಕ್ಕೂ ಅಧಿಕ ಮರಗಳು ಧರೆಗೆ ಉರುಳಿವೆ. ಬೆಂಗಳೂರಿನ ಕೆ.ಆರ್‌. ಸರ್ಕಲ್‌ ಅಂಡರ್‌ ಪಾಸ್‌ ನಲ್ಲಿ ನೀರಿನಲ್ಲಿ ಸಿಲುಕಿದ ಕಾರಿನಲ್ಲಿದ್ದ ಇನ್ಫೋಸಿಸ್‌ಉದ್ಯೋಗಿ, ಆಂಧ್ರಪ್ರದೇಶದ ತೇಲಾಪೋರಲು ಗ್ರಾಮದ ಭಾನುರೇಖಾ (22) ಮೃತಪಟ್ಟಿದ್ದಾರೆ. ಕಾರಿನಲ್ಲಿ ಏಳು ಮಂದಿ ಇದ್ದರು. ಚಾಲಕ ಅಂಡರ್‌ಪಾಸ್‌ ಮೂಲಕ ತೆರಳುತ್ತಿದ್ದಂತೆಯೇ ನೀರು ನುಗ್ಗಿದ್ದು ಇತರರನ್ನು ರಕ್ಷಿಸಲಾಗಿದೆ. ಭಾನುರೇಖಾರಿಗೆ ಖಾಸಗಿ ಆಸ್ಪತ್ರೆ ಯೊಂದು ಚಿಕಿತ್ಸೆ ನೀಡದಿದ್ದುದು ರಾದ್ಧಾಂತಕ್ಕೆ ಕಾರಣವಾಯಿತು.

5 ಲ.ರೂ. ಪರಿಹಾರ
ಮುಖ್ಯಮಂತ್ರಿ ಸಿದ್ದರಾಮಯ್ಯ, ಆಸ್ಪ ತ್ರೆಗೆ ಭೇಟಿ ನೀಡಿ ಮೃತ ಮಹಿಳೆಯ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ 5 ಲಕ್ಷ ರೂ. ಪರಿಹಾರವನ್ನೂ ಪ್ರಕಟಿಸಿದ್ದಾರೆ. ರಾಜಧಾನಿಯ ಪ್ರಮುಖ ಸ್ಥಳಗಳೆಲ್ಲ ಮಳೆಯ ಪ್ರಕೋಪಕ್ಕೆ ತತ್ತರಿಸಿ ಹೋಗಿದೆ.

ಚಿಕ್ಕಮಗಳೂರು: ಇಬ್ಬರ ಸಾವು
ಕೊಪ್ಪಳ ತಾಲೂಕಿನ ಶಿವಪುರದಲ್ಲಿ ರವಿವಾರ ಸಿಡಿಲು ಬಡಿದು ಶ್ರೀಕಾಂತ್‌ ದೊಡ್ಡನಗೌಡ್ರ ಮೇಟಿ (16) ಅವರು ಮೃತಪಟ್ಟಿದ್ದಾರೆ. ಹೊಲದಲ್ಲಿದ್ದಾಗ ಈ ದುರ್ಘ‌ಟನೆ ನಡೆದಿದೆ. ಮತ್ತೂಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಚಿಕ್ಕಹಳ್ಳ ಬಳಿ ಸಮೀಪ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಣುಗೋಪಾಲ್‌ (45) ಎಂಬವರು ಸ್ಕೂಟರ್‌ನಲ್ಲಿ ಚಲಿಸುತ್ತಿದ್ದಾಗ ಮರ ಬಿದ್ದು ಅಸುನೀಗಿದ್ದಾರೆ.

Advertisement

ಮೈಸೂರು ಜಿಲ್ಲೆಯಲ್ಲಿ 3 ಸಾವು
ಮೈಸೂರು ನಗರ ಸಹಿತ ಜಿಲ್ಲೆಯಾದ್ಯಂತ ಮಳೆಯಾಗಿದ್ದು, ಒಟ್ಟು ಮೂವರು ಮಳೆ ಪ್ರಕೋಪಕ್ಕೆ ಅಸುನೀಗಿದ್ದಾರೆ. ಹುಣಸೂರು ತಾಲೂಕಿನ ಮಂಟಿಕೊಪ್ಪಲು ಗ್ರಾಮದಲ್ಲಿ ಹೊಲಕ್ಕೆ ನೀರು ಹಾಯಿಸಲು ತೆರಳಿದ್ದ ಹರೀಶ್‌ (42) ಸಿಡಿಲು ಬಡಿದು ಅಸುನೀಗಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಅವರ್ತಿ ಗ್ರಾಮದಲ್ಲಿ ಲೋಕೇಶ್‌ (55) ಎಂಬುವರು ಹೊಲದಲ್ಲಿದ್ದಾಗ ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಬೆಟ್ಟದಪುರ ಸಮೀಪ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಸ್ವಾಮಿ (18) ಎಂಬವರು ಅಸುನೀಗಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಜಿಲ್ಲೆಯ ಕೆಲವು ಭಾಗಗಳಿಗೆ ಮನೆಗಳಿಗೆ ಹಾನಿಯಾಗಿದೆ. ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಕೂಡ ಉಂಟಾಗಿದೆ.

ರಾಮನಗರ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಜೋರಾಗಿಯೇ ಸುರಿದಿದೆ. ಇದರಿಂದಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೃಷಿ ಚಟುವಟಿಕೆಗಳು ಬಿರುಸಾಗಿವೆ. ಮಾಗಡಿ ನಗರದಲ್ಲಿ ಆಲಿಕಲ್ಲು ಮಳೆಯಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕೆಲವೆಡೆ ಮಳೆಯಾದ್ದರಿಂದ ಕೊಯ್ಲಿಗೆ ಸಿದ್ಧವಾಗಿದ್ದ ಮಾವು ಬೆಳೆಗೆ ಹಾನಿಯಾಗಿದೆ. ತಿಪಟೂರು ತಾಲೂಕಿನ ವ್ಯಾಪ್ತಿಯ ಹಲವು ಭಾಗಗಳಲ್ಲಿ ಸುರಿದ ಮಳೆಯಿಂದಾಗಿ ಮರ, ವಿದ್ಯುತ್‌ ಕಂಬಗಳು ಕುಸಿದು ಬಿದ್ದಿವೆ.

ಇನ್ನೂ 2 ದಿನ
ದಕ್ಷಿಣ ಒಳನಾಡು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಇನ್ನೂ 2 ದಿನಗಳ ಕಾಲ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿದೆ. ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳ ಕೆಲವು ಕಡೆ, ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಒಳನಾಡಿನ ಬೀದರ್‌, ಕಲಬುರಗಿ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ 2 ದಿನಗಳ ಕಾಲ ಸಂಜೆ ವೇಳೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next