ಮುಂಬಯಿ: ವಾಣಿಜ್ಯ ನಗರ ಮುಂಬಯಿನಲ್ಲಿ ಸತತ ನಾಲ್ಕನೇ ದಿನವಾದ ಮಂಗಳವಾರ ಕೂಡ ಬಿರುಸಿನ ಮಳೆ ಮುಂದುವರಿದಿದೆ. ಹೀಗಾಗಿ ಉಪ ನಗರ ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಜನಜೀವನಕ್ಕೆ ತೊಂದರೆಯಾಗಿದೆ. ಹೆಚ್ಚಿನ ಕಡೆಗಳಲ್ಲಿ ರೈಲ್ವೆ ಹಳಿಗಳ ಮೇಲೆ ಪ್ರವಾಹದ ನೀರು ನುಗ್ಗಿದ್ದರಿಂದ ಸ್ಥಳೀಯ ಮತ್ತು ದೂರ ಪ್ರಯಾಣದ ರೈಲುಗಳ ಪ್ರಯಾಣ ರದ್ದುಗೊಳಿಸಲಾಗಿದೆ ಇಲ್ಲವೇ ಮಾರ್ಗ ಬದಲಾವಣೆ ಮಾಡಲಾಗಿದೆ.
ಇನ್ನು ರಸ್ತೆಗಳಲ್ಲಿ ಸಂಚರಿಸಲು ವಾಹನ ಚಾಲ ಕರು, ಬಸ್ ಪ್ರಯಾಣಿಕರು ಗಂಟೆಗಟ್ಟಲೆ ಕಾಯಬೇಕಾಯಿತು.
ನಾಲ್ವರ ಸಾವು: ಮಹಾರಾಷ್ಟ್ರದ ಯವತ್‌ಮಾಳ್‌ನಲ್ಲಿ ಮಳೆ ಸಂಬಂಧಿ ದುರಂತದಲ್ಲಿ ಭಾನುವಾರದಿಂದ ಈಚೆಗೆ ನಾಲ್ವರು ಅಸುನೀಗಿದ್ದಾರೆ. ಜಿಲ್ಲೆಯಲ್ಲಿನ ಸಣ್ಣ, ದೊಡ್ಡ ನದಿಗಳೆಲ್ಲ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
1,500 ಮಂದಿ ರಕ್ಷಣೆ: ಮುಂಬಯಿನ ನಾಲಾ ಸೊಪಾರಾ ರೈಲು ನಿಲ್ದಾಣದಲ್ಲಿ ಪ್ರವಾಹದಲ್ಲಿ ನಡುವೆ ಇದ್ದ ವಡೋದರಾ ಎಕ್ಸ್ ಪ್ರಸ್‌ನಿಂದ 1,500 ಮಂದಿಯನ್ನು ಎನ್‌ಡಿಆರ್‌ಎಫ್ ಸಿಬಂದಿ ರಕ್ಷಿಸಿದ್ದಾರೆ. ಪಾಲಾ^ರ್‌ನಲ್ಲಿ ಉಪ್ಪು ತಯಾರಿಕಾ ಕೇಂದ್ರಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ 81 ಮಂದಿಯನ್ನೂ ರಕ್ಷಿಸಲಾಗಿದೆ. ಥಾಣೆ ಮತ್ತು ಪಾಲಾ^ರ್‌ನಲ್ಲೂ ಧಾರಾಕಾರ ಮಳೆಯಾಗಿದೆ. ಉತ್ತರ ಮುಂಬಯಿ ಮತ್ತು ನಗರದ ಭಾಗಕ್ಕೆ ನೀರು ಪೂರೈಕೆ ಮಾಡುವ ತುಳಸಿ ಕೆರೆಯಲ್ಲಿ ನೀರು ತುಂಬಿದೆ. ಮಳೆ ಕಾರಣದಿಂದ ಡಬ್ಟಾವಾಲಾಗಳು ತಮ್ಮ ಸೇವೆ ರದ್ದುಗೊಳಿಸಿದ್ದಾರೆ. ಗುರುವಾರದವರೆಗೆ ಮುಂಬಯಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ದಾಖಲೆ ಮಳೆ: ಕೊಲಾಬಾದಲ್ಲಿರುವ ಮಳೆ ಮಾಪನ ಕೇಂದ್ರದ ಪ್ರಕಾರ ಸೋಮವಾರ ಬೆಳಗ್ಗೆ 8.30ರಿಂದ ಮಂಗಳವಾರ ಬೆಳಗ್ಗೆ 8.30ರ ಅವಧಿಯಲ್ಲಿ 165.9 ಮಿ.ಮೀ. ಮಳೆಯಾಗಿದೆ. ಸಾಂತಾಕ್ರೂಜ್‌ನಲ್ಲಿರುವ ಕೇಂದ್ರ ಇದೇ ಅವಧಿಯಲ್ಲಿ 184.4 ಮಿ.ಮೀ. ಮಳೆಯಾಗಿದೆ ಎಂದು ದಾಖಲಿಸಿದೆ.
ತಪ್ಪಿದ ದುರಂತ: ಮುಂಬಯಿ ವಿಮಾನ ನಿಲ್ದಾಣದಲ್ಲಿ ಮಳೆಯಿಂದಾಗಿ ವಿಮಾನ ಹಾರಾಟಕ್ಕೂ ತೊಂದರೆ ಉಂಟಾಗಿದೆ. ವಿಜಯವಾಡದಿಂದ ಮುಂಬಯಿಗೆ ಬರುತ್ತಿದ್ದ ವಿಮಾನ ಬದಲಿ ರನ್‌ವೇಯಲ್ಲಿ ಲ್ಯಾಂಡ್ ಆಗುವ ವೇಳೆ ಜಾರಿ ಹೋಗಿದೆ. ನಿಗದಿತ ಸ್ಥಳಕ್ಕಿಂತ 10 ಅಡಿ ಮುಂದೆ ಹೋಗಿ ನಿಂತಿದೆ.
ಖಾಸಗಿಯವರಿಗೆ ಒಪ್ಪಿಸಿ: ಬಾಂಬೆ ಹೈಕೋರ್ಟ್
ಪ್ರತಿ ವರ್ಷದ ಮುಂಗಾರಿನಲ್ಲಿ ಹಳಿಗಳು ಮುಳುಗುವುದನ್ನು ತಪ್ಪಿಸಲು ಸಾಧ್ಯವಾಗದೇ ಇದ್ದರೆ ಖಾಸಗಿಯವರಿಗೆ ಒಪ್ಪಿಸಿ ಎಂದು ಬಾಂಬೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಹಳಿಗಳು ಮುಳುಗುವುದರ ವಿರುದ್ಧ ಸಲ್ಲಿಸಲಾಗಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ.ಎನ್.ಎಚ್. ಪಾಟೀಲ್ ನೇತೃತ್ವದ ಪೀಠ, ಪ್ರತಿ ವರ್ಷ ನೆರೆ ಉಂಟಾಗುವ ಸ್ಥಳಗಳನ್ನು ಗುರುತು ಮಾಡಿ, ಅಲ್ಲಿ ಎತ್ತರಿಸಿದ ಮಾರ್ಗಗಳ ಮೂಲಕ ಹಳಿಗಳು ಇರು ವಂತೆ ಏಕೆ ಮಾಡಬಾರದು ಎಂದು ಪ್ರಶ್ನೆ ಮಾಡಿದೆ.