Advertisement

ಧೂಳುಮಯ ಶಿರ್ವ ಬಂಗ್ಲೆ  ಮೈದಾನ ರಸ್ತೆಗೆ ಡಾಮರು ಕಾಮಗಾರಿ ಎಂದು…?

01:00 AM Feb 07, 2019 | Team Udayavani |

ಶಿರ್ವ: ಮುದರಂಗಡಿ-ಶಿರ್ವ ರಸ್ತೆಯಿಂದ ಶಿರ್ವ ತೊಟ್ಲಗುರಿ ಬಂಗ್ಲೆ ಮೈದಾನಕ್ಕೆ ಹೋಗುವ ರಸ್ತೆ ಸಂಪೂರ್ಣ ಧೂಳುಮಯವಾಗಿದ್ದು ಸಂಚಾರ ದುಸ್ತರವಾಗಿದೆ. ಸುಮಾರು 5 ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ಈ ರಸ್ತೆ ಡಾಮರು ಕಾಣದೆ ಮಣ್ಣಿನ ರಸ್ತೆಯಾಗಿಯೇ ಉಳಿದಿದೆ.  

Advertisement

ಸಂಪರ್ಕ ರಸ್ತೆ 
ಶಿರ್ವ ಗ್ರಾ.ಪಂ. ವ್ಯಾಪ್ತಿಯ ತೊಟ್ಲಗುರಿ ವಾರ್ಡ್‌ನ ಬಂಗ್ಲೆ ಗುಡ್ಡೆ ಮೈದಾನದ ಸುಮಾರು 5ಎಕರೆ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರ, ಪಶು ವೈದ್ಯಕೀಯ ಆಸ್ಪತ್ರೆ, ನಿರ್ವಹಣೆಯಿಲ್ಲದ ಪ್ರವಾಸಿ ಮಂದಿರ, ಜೇನು ಸಂಸ್ಕರಣಾ ಕೇಂದ್ರ ಹಾಗೂ ಜಿ.ಪಂ. ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾಕ ಇಲಾಖೆಯ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯವಿದೆ. ದಶಕಗಳ ಹಿಂದೆ ಈ ಬಂಗ್ಲೆ ಮೈದಾನದಲ್ಲಿ ಪೊಲೀಸ್‌ ಪರೇಡ್‌ ಕೂಡ ನಡೆಯುತ್ತಿತ್ತು.

ಧೂಳುಮಯ 
ಈ ಪ್ರದೇಶದಲ್ಲಿ ಸುಮಾರು 75ಕ್ಕೂ ಹೆಚ್ಚು ಮನೆಗಳಿವೆ. ರಸ್ತೆ ತುಂಬಾ ಹದಗೆಟ್ಟಿರುವುದರಿಂದ ರಿಕ್ಷಾ ಚಾಲಕರು ಕೂಡ ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ರಸ್ತೆಯು ಮಳೆಗಾಲದಲ್ಲಿ ಸಂಪೂರ್ಣ ಕೆಸರುಮಯವಾಗಿ ಬೇಸಗೆಯಲ್ಲಿ ಧೂಳುಮಯವಾಗಿ ಜನರು ರಸ್ತೆಯಲ್ಲಿ ನಡೆ ದಾಡಲೂ ಪರದಾಡುತ್ತಿದ್ದಾರೆ.  

ನೆನೆಗುದಿಗೆ 
ಕಾಪು ತಾಲೂಕಾಗಿ ಪರಿವರ್ತನೆ ಹೊಂದಿದ ಹಿನ್ನೆಲೆ ಯಲ್ಲಿ  ಬಂಗ್ಲೆ ಮೈದಾನದ ಪ್ರದೇಶದಲ್ಲಿ ಸರಕಾರಿ ಕಚೇರಿಗಳೊಂದಿಗೆ ನಾಡ ಕಚೇರಿಯೂ ಬಂದರೆ  ರಸ್ತೆ ದುರಸ್ತಿಯಾಗುವ ಭರವಸೆ ಪರಿಸರದ ನಾಗರಿಕರಲ್ಲಿತ್ತು. ತಾಲೂಕಾಗಿ ವರ್ಷ ಕಳೆದರೂ ಯಾವುದೇ ಕಚೇರಿಗಳು ಬಂದಿಲ್ಲ.  ಶಿರ್ವ ಗ್ರಾ.ಪಂ. ವ್ಯಾಪ್ತಿಯ ಬಹುತೇಕ ಎಲ್ಲ ಪ್ರದೇಶದ ರಸ್ತೆಗಳು ಡಾಮರೀಕರಣಗೊಂಡರೂ ಅರ್ಧ ಶತಮಾನದ ಇತಿಹಾಸವಿರುವ ಈ ರಸ್ತೆ ಮಾತ್ರ ಡಾಮರು ಕಂಡಿಲ್ಲ.  

ಚುನಾವಣೆ ಬಹಿಷ್ಕಾರ?
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಸ್ತೆ ದುರಸ್ತಿ ಪಡಿಸದಿದ್ದರೆ ಮತದಾರರು ಚುನಾವಣೆ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದರು. ಕೊನೆ ಗಳಿಗೆಯಲ್ಲಿ ಜನಪ್ರತಿನಿಧಿಗಳ ಆಶ್ವಾಸನೆಯಿಂದ ಅದನ್ನು ಹಿಂತೆಗೆದುಕೊಂಡಿದ್ದರು. ಈಗ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದರೂ ಅಭಿವೃದ್ಧಿಯಾಗಿಲ್ಲ. ಇದರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸುವುದಾಗಿ ಸ್ಥಳೀಯರಾದ ಡೆನ್ನಿಸ್‌ ಲೋಬೋ ಹೇಳುತ್ತಾರೆ. 

Advertisement

ಶೀಘ್ರ ಡಾಮರು ಕಾಮಗಾರಿಯಾಗಲಿ
ರಸ್ತೆಯು ಧೂಳುಮಯವಾಗಿದ್ದು  ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುತ್ತದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬಂಗ್ಲೆ ಮೈದಾನದ ಡಾಮರೀಕರಣ ಅಗತ್ಯ ಆಗಬೇಕಿದೆ. 
-ಹರೀಶ್‌ ಆಚಾರ್ಯ, ಸ್ಥಳೀಯ ನಿವಾಸಿ

ಗುಣಮಟ್ಟದ ರಸ್ತೆಗೆ ಪ್ರಯತ್ನ
ಕಾಪು ತಾಲೂಕು ಕೇಂದ್ರವಾದ ಹಿನ್ನೆಲೆಯಲ್ಲಿ ನಾಡ ಕಚೇರಿ ಹಾಗೂ ಸರಕಾರಿ ಕಚೇರಿಗಳು ಈ ಪ್ರದೇಶಕ್ಕೆ ಬರುವ ಪ್ರಸ್ತಾವನೆಯಿದ್ದು ಸರಕಾರದ ಬದಲಾವಣೆಯಿಂದ ವಿಳಂಬಗೊಂಡಿದೆ. ಕ್ರಿಯಾ ಯೋಜನೆಯಲ್ಲಿ ಮೈದಾನ ಅಭಿವೃದ್ಧಿಗೆ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ 5.ಲ.ರೂ ಮೀಸಲಿಡಲಾಗಿದೆ. ಗುಣಮಟ್ಟದ ರಸ್ತೆ ನಿರ್ಮಿಸಲು ಪ್ರಯತ್ನಿಸುತ್ತಿದ್ದೇನೆ.  
-ಸುನೀಲ್‌ ಕಬ್ರಾಲ್‌, ಸ್ಥಳೀಯ ವಾರ್ಡ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next