ಅಂದು ಸಂಜೆ ಸುಮಾರು ನಾಲ್ಕರ ಸಮಯ. ಕಾಲೇಜಿನಿಂದ ಮನೆಗೆ ಹೋಗುವ ಅವಸರದಲ್ಲಿದ್ದೆ. ನಮ್ಮೂರ ಬಸ್ಸಿಗಾಗಿ ಬಸ್ ಸ್ಟಾಂಡ್ ನಲ್ಲಿ ಕಾಯುತ್ತಾ ನಿಂತಿದ್ದೆ. ಬಸ್ ಸ್ಟಾಂಡ್ ಕೂಡ ಜನರಿಂದ ತುಂಬಿತ್ತು. “ಅಯ್ಯೋ ಇವತ್ತಾದ್ರು ಬಸ್ಸಿನಲ್ಲಿ ಕಿಟಕಿ ಪಕ್ಕ ಸೀಟ್ ಸಿಕ್ಕಿದರೆ ಚೆನ್ನಾಗಿತ್ತು ಎಂದು ಮನದಲ್ಲಿಯೇ ಗೊಣಗಿಕೊಂಡೆ. ಅದೇ ವೇಳೆಗೆ ನಮ್ಮೂರಿಗೆ ಹೋಗುವ ಬಸ್ ಬಂದೇ ಬಿಡ್ತು. ಹೇಗೋ ಸಾಹಸ ಮಾಡಿ ಎಲ್ಲರನ್ನೂ ಹಿಂದೆ ಮುಂದೆ ತಳ್ಳಿ ನನ್ನಾಸೆಯಂತೆ ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತುಕೊಂಡು ಅಬ್ಟಾ.. ಅಂತೂ ಸೀಟ್ ಸಿಕ್ತು ಎಂದು ನಗುತ್ತಾ ಬ್ಯಾಗ್ ನಿಂದ ಇಯರ್ ಪೋನ್ ತೆಗೆದು ಕಿವಿಗೆ ಜೋತುಬಡಿಸಿ ಮೊಬೈಲ್‌ನಲ್ಲಿ ಹಾಡನ್ನು ಕೇಳುತ್ತಾ ಇದ್ದೆ. ಫ್ರೀ ಟಿಕೆಟ್ ಪ್ರಭಾವದಿಂದ ಸ್ವಲ್ಪ ಸಮಯದಲ್ಲಿಯೇ ಬಸ್ಸು ಜನರಿಂದ ತುಂಬಿ ತುಳುಕಾಡುತ್ತಿತ್ತು.
ಅದೇ ಸಮಯಕ್ಕೆ ನನ್ನ ಎದುರುಗಡೆ ಒಂದು ಜೋಡಿ ಬಂದು ನಿಂತಿದ್ದರು. ಅವರಿಬ್ಬರೂ ಕೈಸನ್ನೆ ಮಾಡುವುದರ ಮೂಲಕ ಪರಸ್ಪರ ಮಾತನಾಡಿ ಕೊಳ್ಳುತ್ತಿದ್ದರು. ನನಗೆ ಅವರ ವರ್ತನೆ ತುಂಬಾ ವಿಚಿತ್ರ ಹಾಗೂ ವಿಶೇಷವಾಗಿ ಕಂಡಿತು. ಅದಕ್ಕಾಗಿ ಅವರನ್ನೇ ದಿಟ್ಟಿಸಿ ನೋಡುತ್ತಾ ಇದ್ದೆ. ಆಗ ನನಗೆ ತಿಳಿದದ್ದು ಇಬ್ಬರಿಗೂ ಮಾತು ಬರುವುದಿಲ್ಲವೆಂದು.
ಆದರೂ ಅವರ ನಡುವೆ ಕಾಳಜಿ ಎಷ್ಟಿತ್ತೆಂದರೆ ಆ ಜನರ ನೂಕು ನುಗ್ಗಿನಲ್ಲೂ ಕೂಡ ಆತ ತನ್ನ ಹೆಂಡತಿಗಾಗಿ ಸೀಟನ್ನು ಹುಡುಕುತ್ತಿದ್ದ. ಆಕೆಯೂ ಕೂಡ
ತನ್ನ ಸೀರೆ ಸೆರಗಿನಿಂದ ತನ್ನ ಗಂಡನಿಗೆ ಗಾಳಿ ಬೀಸುತ್ತಿದ್ದಳು. ಅವರಿಬ್ಬರ ನಡುವೆ ಪ್ರೀತಿ, ಕಾಳಜಿಗೆ ಯಾವುದೇ ಕೊಂದು ಕೊರತೆ ಇರಲಿಲ್ಲ. ಆ ಸನ್ನಿವೇಶ ಮನಮಟ್ಟುವಂತೆ ಇತ್ತು.
ಅದೆಷ್ಟೋ ಗಂಡ ಹೆಂಡತಿಯರ ಜಗಳಕ್ಕೆ, ಹಾಗೂ ಇಂದು ಮದುವೆಯಾಗಿ, ನಾಳೆ ಡಿವೋರ್ಸ್ ಪಡೆಯುವ ಜೋಡಿಗಳಿಗೆ ಇವರು ಮಾದರಿಯಾಗಿ ಕಾಣುತ್ತಾರೆ ಎಂದು ಅನಿಸಿದ್ದು ನಿಜ..
ಈ ಸ್ವಾರ್ಥ ಪ್ರಪಂಚದಲ್ಲಿ ಅವರದೇ ಆದ ಪುಟ್ಟ ಪ್ರಪಂಚವನ್ನು ಕಟ್ಟಿ ನಿಷ್ಕಲ್ಮಶ ಜೀವನವನ್ನು ನಡೆಸುತ್ತಿರುವ ಆ ಮುಗ್ಧ ಮನಸುಗಳಿಗೆ ಆ ದೇವರು ಒಳ್ಳೆಯದನ್ನೇ ಮಾಡಲಿ ಎಂದು ಪ್ರಾರ್ಥಿಸಿಕೊಂಡೆ…
-ಕಾವ್ಯಾ ಹೆಗಡೆ
ವಾನಳ್ಳಿ