ಬಿನೋಯ್: ಐಸಿಸಿ ಅಂಡರ್ 19 ವಿಶ್ವಕಪ್ ಕೂಟದ ಫೈನಲ್ ಪಂದ್ಯ ರವಿವಾರ ನಡೆದಿದೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಿಮ ಹಣಾಹಣಿಯಲ್ಲಿ ಟೀಂ ಇಂಡಿಯಾ ಸೋಲನುಭವಿಸಿದೆ. ಕೂಟದುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿದ್ದ ಉದಯ್ ಸಹರನ್ ಬಳಗ ಫೈನಲ್ ಪಂದ್ಯದಲ್ಲಿ ಎಡವಿತು.
ಈ ಪಂದ್ಯದಲ್ಲಿ ಭಾರತದ ಆಟಗಾರರಾದ ಮುರುಗನ್ ಅಭಿಷೇಕ್ ಮತ್ತು ನಮನ್ ತಿವಾರಿ ನಡುವಿನ ಸಂಭಾಷಣೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಭಾರತವು ಸೋಲಿನತ್ತ ನೋಡುತ್ತಿದ್ದರೂ ಇಬ್ಬರೂ ಪರಸ್ಪರ ಅತ್ಯಂತ ಸಕಾರಾತ್ಮಕ ರೀತಿಯಲ್ಲಿ ಮಾತನಾಡುವುದನ್ನು ಕಾಣಬಹುದು. ಭಾರತಕ್ಕೆ 75 ಎಸೆತಗಳಲ್ಲಿ ಕೇವಲ ಎರಡು ವಿಕೆಟ್ ಗಳ ಸಹಾಯದಿಂದ 103 ರನ್‌ಗಳ ಅಗತ್ಯವಿರುವಾಗ ಸಂಭಾಷಣೆ ನಡೆದಿದೆ.
“ಯಾದ್ ರಖನಾ, ಹಾರೇಂಗೆ ಪರ್ ಸೀಖ್ ಕೆ ಜಾಯೇಂಗೆ (ನೆನಪಿನಲ್ಲಿಟ್ಟುಕೊ. ನಾವು ಸೋಲುತ್ತೇವೆ ಆದರೆ ನಾವು ಕಲಿಯುತ್ತೇವೆ),”ಎಂದು ನಮನ್ ತಿವಾರಿ ಅವರು ಮುರುಗನ್ ಗೆ ಹೇಳುವುದು ಸ್ಟಂಪ್ ಮೈಕ್ ನಲ್ಲಿ ಸೆರೆಯಾಗಿದೆ.
ಬಿನೋಯ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಏಳು ವಿಕೆಟ್ ನಷ್ಟಕ್ಕೆ 253 ರನ್ ಪೇರಿಸಿತು. ಉತ್ತರವಾಗಿ ಭಾರತ 43.5 ಓವರ್ ಗಳಲ್ಲಿ 174 ರನ್ ಮಾತ್ರ ಗಳಿಸಿತು.