ಕಾರ್ಕಳ: ವರ್ತಮಾನದ ಯುವ ಜನತೆ ವಿವಿಧ ಮೂಲಗಳಿಂದ ಬೌದ್ಧಿಕ ಕೌಶಲವನ್ನು
ಹೊಂದಿಸಿಕೊಳ್ಳುತ್ತಿದೆ. ಅದರಷ್ಟೇ ಮುಖ್ಯವಾಗಿ ಹೃದಯ ವೈಶಾಲ್ಯದ ಆವಶ್ಯಕತೆಯನ್ನೂ ಯುವಜನಾಂಗಕ್ಕೆ ಮನಗಾಣಿಸಬೇಕಾಗಿದೆ. ಈ ಮಹತ್ಕಾರ್ಯ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಬೇಕಾಗಿದೆ ಎಂದು ಪ್ರಾಧ್ಯಾಪಕ, ಲೇಖಕ ಡಾ| ವರದರಾಜ ಚಂದ್ರಗಿರಿ ಹೇಳಿದ್ದಾರೆ.
ಅವರು ಶುಕ್ರವಾರ ಹೊಟೇಲ್ ಪ್ರಕಾಶದ ಸಂಭ್ರಮ ಸಭಾಮಂದಿರದಲ್ಲಿ ಜರಗಿದ ಕಾರ್ಕಳ ಸಾಹಿತ್ಯ ಸಂಘದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಂಡಿತ ಪರಂಪರೆಯೊಂದು ಗಳಿಸಿದ್ದ ಮತ್ತು ತಿಳಿಸಿದ್ದ ಭಾಷಾ ಶುದ್ಧಿಯ ಬಗೆಗಿನ ಅರಿವಾಗಲೀ,ಪರಂಪರೆ ಹೇಗೆ ಹಲವು ಬಗೆಯ ಹೊಸತನಗಳಿಗೆ ನಾಂದಿ ಹಾಡಿದೆ ಎನ್ನುವುದರ ಅರಿವಾಗಲೀ ಹೊಸ ಪೀಳಿಗೆಗೆ ಇಲ್ಲವಾಗಿರುವುದು ವಿಷಾದನೀಯ. ಈ ತಲೆಮಾರಿಗೆ ಸಾಹಿತ್ಯ ಸಂವೇದನೆಯನ್ನು ತಿಳಿಸಿ ಹೇಳುವ ಕಾರ್ಯವನ್ನು ನಮ್ಮ ಸಾಹಿತ್ಯ ಸಂಘಗಳೂ ಕನ್ನಡಪರ ಸಂಘಟನೆಗಳೂ ಮಾಡಬೇಕಾಗಿದೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯ ಕೆ. ಭಾಸ್ಕರ ಕಾರಂತ ಸ್ವಾಗತಿಸಿದರು. ಕಾರ್ಯಕರ್ತ ವೈ. ಜಗದೀಶ ಪರಿಚಯಿಸಿದರು. ಸಹ ಕಾರ್ಯದರ್ಶಿ ಕೆ. ಪಿ. ಶೆಣೈ ಅತಿಥಿಯನ್ನು ಸತ್ಕರಿಸಿದರು. ಗೌರವಾಧ್ಯಕ್ಷ ಆರ್. ತುಕಾರಾಮ ನಾಯಕ್ ಉಪಸ್ಥಿತರಿದ್ದರು. ರುಕ್ಮಿಣೀದೇವಿ ಕಾರ್ಯಕ್ರಮ ನಿರೂಪಿಸಿ, ಸಾಹಿತ್ಯ ಸಂಘದ ಕಾರ್ಯದರ್ಶಿ ಪ್ರೊ| ಬಿ. ಪದ್ಮನಾಭ ಗೌಡ ವಂದಿಸಿದರು.