Advertisement
ಪ್ರಪಂಚದಲ್ಲಿ ವರ್ಷಗಳಂತೂ ಗೊತ್ತಾಗದೇ ಉರುಳುತ್ತಲೇ ಇರುತ್ತವೆ. ಆದರೆ, ಈ ಮೂರು ಗಂಟೆ ಮಾತ್ರ ಬಿದ್ದುಕೊಂಡೇ ಇರುತ್ತದೆ, ಬೇಗ ಮುಗಿದು ಹೋಗುವುದಿಲ್ಲ. ಕೆಲವರಿರುತ್ತಾರೆ ಬಿಡಿ ಮೂರು ಗಂಟೆಯೂ ಸಾಲದೆ, “ಅಯ್ಯೋ! ಇನ್ನೂ ಇತ್ತು’ ಅಂತ ಅವರಿಗೆ ಇನ್ನೂ ಮೂರು ಗಂಟೆ ಕೊಟ್ಟರೂ ಅದೇ ಮಾತು ಹೇಳ್ತಾರೆ! ಈ ಮೂರು ಗಂಟೆಯಲ್ಲಿ ಅಕ್ಷರ ಗೀಚಲು ಕೂತಾಗ ಆಗುವ ಅವಾಂತರಗಳು ಒಂದೆರಡಲ್ಲ! ಸಖತ್ ಇಂಟೆರೆಸ್ಟಿಂಗ್.
Related Articles
Advertisement
ಕನ್ನಡದಲ್ಲಿ ಒಂದೂ ಬಿಟ್ಟಿಲ್ಲ, ಇಂಗ್ಲಿಷ್‌ನಲ್ಲೂ ಬಿಟ್ಟಿಲ್ಲ, ಸಮಾಜವೂ ಔಟ್ ಆಫ್ ಔಟ್ ಬರುತ್ತೆ. ಗಣಿತದಲ್ಲಿ ಪಾಸ್ ಆಗಲಿಲ್ಲ ಅಂದ್ರೆ ಇವರ್ಯಾಕೆ ನನ್ನ ಫೇಲ್ ಮಾಡ್ತಾರೆ? ಕನ್ನಡದಲ್ಲಿ ಬಂದ ನೂರಕ್ಕೆ ನೂರು ಅಂಕಕ್ಕೂ ಫೇಲ್ ಅಂಕಪಟ್ಟಿಯೊಂದಿಗೆ ಕುಳಿತುಕೊಳ್ಳಬೇಕಾ? ಈ ಮೂರು ಗಂಟೆ ಇಷ್ಟೊಂದು ಅರ್ಥವಾಗದೇ ಕಗ್ಗಂಟಾಗಿದೆಯಾ? ಅದರ ಬಗ್ಗೆ ಯಾರೂ ಯೋಚಿಸಲೇ ಇಲ್ಲ ಅನಿಸುತ್ತೆ. ಎಲ್ಲರೂ ಮೂರು ಗಂಟೆಯ ಹಿಂದೆ ಓಡುವವರೇ ನನ್ನನ್ನು ಸೇರಿದಂತೆ. ನಾನು ಮೂರು ಗಂಟೆಯಲ್ಲಿ ಒಳ್ಳೆಯ ವಿಚಾರ ಮಾಡಿಬಂದೆ. ಅದನ್ನು ಹೋಗಿ ಅವರ ಹತ್ರ ಹೇಳಿದರೆ “ಆಯ್ತು ನಡಿಯಪ್ಪ’ ಅಂತಾರೆ ಅಷ್ಟೇ!
ಮೂರು ಗಂಟೆಯ ಜಗತ್ತಿಗೆ ವಾಪಸು ಬಂದು ಬಿಡೋಣ. ಕಣ್ಣಲ್ಲಿ ಮಾತಾಡುವವರು. ಕಣ್ಣಂಚಿನಲ್ಲಿ ಒಂದೇ ನೋಟಕ್ಕೆ ದೃಷ್ಟಿ ಚೆಲ್ಲಿ, ಚಕ್ಕನೆ ಉತ್ತರ ಕದ್ದು ಬರೆಯುವವರು, ಸಾಕ್ಸ್ ಒಳಗಿನಿಂದ ಕಳ್ಳ ಬೆಕ್ಕಿನಂತೆ ಕಾಪಿ ತಗೆಯುವವರು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ರೂಂ ಕಾಯುವ ಅಸಾಮಿಯೇ ಉತ್ತರ ಹೇಳಲು ನಿಲ್ಲುವುದು, ಆಗಾಗ ಮೇಲಿನವರು ಗತ್ತಿನಿಂದ ಬಂದು ಹೋಗುವುದು, ಚೆನ್ನಾಗಿ ಬರೆಯುವವರ ಧಿಮಾಕು, ಏನೂ ಬರೆಯವದವರ ದೈನ್ಯತೆ! ಮಧ್ಯಮ ವರ್ಗದವರ ನಿರ್ಲಿಪ್ತತೆ, ರಾತ್ರಿಯಿಡೀ ಓದಿದವರ ನಿದ್ದೆಗಳು, ಟೈಮ್ ಎಷ್ಟಿದೆ ಅಂತ ಹೇಳ್ಳೋಕೆ ಹೊಡೆಯುವ ಗಂಟೆಗಳು… ಪುಣ್ಯಾತಿYತ್ತಿ ಶೀಲ ಅರ್ಧ ಗಂಟೆಗೊಮ್ಮೆ ಕೇಳುವ ಅಡಿಷನಲ್ ಶೀಟ್ಸ್, ಪರೀಕ್ಷೆ ಬರೆಯುವ ಬದಲು ಪರೀಕ್ಷೆ ಪದ್ಧತಿಯನ್ನೇ ಹಿಡಿದು ನೀನು ಸರೀನಾ? ತಪ್ಪಾ? ಅಂತ ಕೆದಕುವ ನನ್ನಂಥ ಮರುಳರು, ಪೇಪರ್ ನೋಡಿ ತಲೆ ತಿರುಗಿ ಬೀಳುವವರು, ತುಂಬಾ ಸುಲಭವಿದ್ದರೆ ಮೆಲ್ಲನೆ ಶಿಳ್ಳೆ ಹಾಕುವವರು, ಹಾಲ್ ಟಿಕೆಟ್ ಮರೆತು ಬಂದು ಅದರ ಟೆನ್ಸನ್‌ನಲ್ಲಿ ಓದಿದ್ದನ್ನೇ ಮರೆಯುವವರು, ಪೆನ್ನಿನ ಇಂಕ್ ಖಾಲಿ ಅಂತ ಬೆವರುವವರು, ಉತ್ತರ ಬರೆಯುವ ಬುಕ್‌ಲೆಟ್ ಅನ್ನು ಬುಕ್‌ನಂತೆ ಬರೆದು ದಾರ ಪೋಣಿಸುವವರು, ಇರುವ ಬುಕ್‌ಲೆಟ್ ಅನ್ನು ವ್ಯರ್ಥಮಾಡದೇ ಹಾಗೇ ವಾಪಸು ಕೊಡುವ ಉದಾರ ಗುಣದವರು ಎಲ್ಲರೂ ಸೇರಿರುತ್ತಾರೆ.
ಅದೊಂದು ಅದ್ಭುತ ಜಗತ್ತು, ಹೊಸ ಜಗತ್ತು. ಕೆಲವರಿಗೆ ಮಾತ್ರವೇ ಸಿದ್ಧಿಸುವ ಜಗತ್ತು. ಬರೀ ಮೌನದಲ್ಲಿ ಲಕ್ಷೊàಪಲಕ್ಷ ಮಾತುಗಳು ಅಲ್ಲಿ ಸುಳಿದಿರುತ್ತವೆ. ನಮ್ಮನ್ನು ಕಾಯುವವನು ಮೂರು ಗಂಟೆ ಕೂತು ತನ್ನ ತಾಳ್ಮೆ ಪರೀಕ್ಷಿಸಿಕೊಂಡು ಕೊನೆಯ ಬೆಲ್ ಆದಾಗ, ಬಿಡುಗಡೆಯ ಉಸಿರು ಬಿಡುವಾಗಿನ ಮುಖದ ನಿರಾಳತೆ ಅದ್ಭುತ. ಹಾಗೂ ಹೀಗೂ ಮಾಡಿ ಮೂರು ಗಂಟೆ ಮುಗಿಸಿಬಂದರೆ ಮುಗಿಯಿತು. ಅಮೇಲೆ ನಾವುಂಟು, ನಮ್ಮ ಫಲಿತಾಂಶವುಂಟು, ನಮ್ಮ ಮುಂದಿನ ಜೀವನವುಂಟು, ನಮ್ಮ ಜೀವನ ನಿರ್ಧರಿಸುವುದು ಬೇರೆ ಯಾವುದೂ ಅಲ್ಲ, ಆ ಮೂರು ಗಂಟೆಗಳು. ಬೇರೆ ಏನಿದ್ದರೂ ಅದೆಲ್ಲ ಸೈಡಿಗೆ, ಈ ಗಂಟೆಯೇ ಮೈನಿಗೆ!
– ಸದಾಶಿವ್ ಸೊರಟೂರು