Advertisement
ಆರೋಗ್ಯಕರ ಆಹಾರ ಸೇವನೆ ಎಂದರೆ ಮಿತಿಯಲ್ಲಿ ಸೇವನೆ. ಕೆಲವು ವಾರಗಳು ಅಥವಾ ತಿಂಗಳುಗಳ ಅವಧಿಗೆ ಮಾತ್ರ ಅಲ್ಲದೆ ಜೀವನಪರ್ಯಂತ ಅಥವಾ ನಾವು ಬಯಸಿದ ದೇಹತೂಕ ಗಳಿಸುವವರೆಗೆ ಅನುಸರಿಸಬಹುದಾದ ಆಹಾರಾಭ್ಯಾಸವನ್ನು ರೂಪಿಸಿ ಅನುಸರಿಸುವುದು ಗುರಿ. ಆದ್ದರಿಂದ ಸಮತೋಲನವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಮಿತಿಯಲ್ಲಿ ಆಹಾರ ಸೇವನೆಯತ್ತ ಆಲೋಚಿಸಿ. ಕೆಲವು ಗುಂಪಿನ ಆಹಾರವಸ್ತುಗಳ ಮೇಲೆ ನಿಷೇಧ ಹೇರಿಕೊಂಡಾಗ ಅವುಗಳು ಬೇಕು ಎಂಬ ಬಯಕೆ ಉಂಟಾಗುವುದು ಸಹಜ ಮತ್ತು ಇದರಿಂದಾಗಿ ಹೇಗಾದರೂ ತಿಂದುಬಿಡಬೇಕು ಎಂಬ ಹಂಬಲ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಸೇವಿಸುವ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಮತ್ತು ಆಗಾಗ ತಿನ್ನದಿರುವ ಮೂಲಕ ಆರಂಭಿಸಿ.
Related Articles
Advertisement
ಮ್ಯಾಕ್ರೊನ್ಯೂಟ್ರಿಯೆಂಟ್‌ಗಳು ಮತ್ತು ಮೈಕ್ರೊನ್ಯೂಟ್ರಿಯೆಂಟ್‌ಗಳ ಪೂರೈಕೆಯ ಜತೆಗೆ ಆರೋಗ್ಯವಾಗಿರುವುದಕ್ಕೆ ಮುಂದಿನ ಹೆಜ್ಜೆ ಎಂದರೆ ಅಗತ್ಯವಿರುವಷ್ಟು ದ್ರವಾಂಶ ಪೂರೈಕೆ. ಪ್ರತೀ ದಿನಕ್ಕೆ 10ರಿಂದ 15 ಕಪ್ ದ್ರವಾಹಾರ ಕುಡಿಯುವ ಗುರಿ ಇರಿಸಿಕೊಳ್ಳಿ. ಇದು ಸಾದಾ ನೀರು, ಆರೋಗ್ಯಕರ ಸೂಪ್‌ಗ್ಳು, ಎಳನೀರು, ಮಜ್ಜಿಗೆ, ಜೀರಿಗೆ ನೀರು, ಪಾಯಸಗಳು, ಆರೋಗ್ಯಕರ ಸೂ¾ತೀಗಳು ಇತ್ಯಾದಿ ರೂಪದಲ್ಲಿ ಇರಬಹುದು. ಉಪ್ಪಿನ ಸೇವನೆಯ ಪ್ರಮಾಣವನ್ನು ದಿನಕ್ಕೆ 1 ಚಹಾಚಮಚಕ್ಕೆ ಮಿತಿಗೊಳಿಸಿ. ಸಂಸ್ಕರಿಸಿದ ಹಿಟ್ಟುಗಳು ಮತ್ತು ಸಕ್ಕರೆ ಭರಿತ ತಿನಿಸುಗಳನ್ನು ವರ್ಜಿಸಿ. ಸಕ್ಕರೆಯು ಶಕ್ತಿಯ ಮಟ್ಟ ಏರುಪೇರು ಆಗಲು ಕಾರಣವಾಗುತ್ತದೆ ಹಾಗೂ ಆರೋಗ್ಯ ಮತ್ತು ದೇಹತೂಕದ ಸಮಸ್ಯೆಗಳಿಗೆ ಕೊಡುಗೆ ನೀಡುವ ಸಾಧ್ಯತೆಗಳಿವೆ. ಸಿಹಿ ಇಷ್ಟಪಡುವವರು ಹಣ್ಣುಗಳನ್ನು ತಿಂದರೆ ನಾರಿನಂಶ, ವಿಟಮಿನ್‌ಗಳು ಮತ್ತು ಆ್ಯಂಟಿಓಕ್ಸಿಡೆಂಟ್‌ಗಳು ಪೂರೈಕೆಯಾಗುತ್ತವೆ. ಪ್ರತೀ ತುತ್ತನ್ನೂ ಆನಂದಿಸುತ್ತ ಚೆನ್ನಾಗಿ ಜಗಿದು ತಿನ್ನಿ. ಹೊಟ್ಟೆ ತುಂಬಿದೆ ಅನ್ನಿಸಿದಾಗ ಆಹಾರ ಸೇವನೆ ನಿಲ್ಲಿಸಿ. ಯಾಕೆಂದರೆ ಇನ್ನು ಆಹಾರ ಸಾಕು ಎಂದು ಮಿದುಳು ದೇಹಕ್ಕೆ ಸೂಚನೆ ನೀಡುವುದಕ್ಕೆ ಸ್ವಲ್ಪ ಹೊತ್ತು ತೆಗೆದುಕೊಳ್ಳುತ್ತದೆ, ಹೀಗಾಗಿ ನಿಧಾನವಾಗಿ ಆಹಾರ ಸೇವಿಸಿ. ಬಾಯಾರಿಕೆಯನ್ನು ಹಸಿವು ಎಂದು ತಪ್ಪಾಗಿ ಭಾವಿಸಬೇಡಿ, ಕೆಲವೊಮ್ಮೆ ನಮಗೆ ಬೇಕಿರುವುದು ಒಂದು ಲೋಟ ನೀರು ಮಾತ್ರವಾಗಿರುತ್ತದೆ.
ನಿಮಗೆ ಮಾಡುವುದಕ್ಕೆ ಇಷ್ಟವಾದ ಚಟುವಟಿಕೆಗಳನ್ನು ಹುಡುಕಿಕೊಳ್ಳಿ ಮತ್ತು ಅದನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಿ. 40 ನಿಮಿಷಗಳ ಕಾಲ ನಡಿಗೆ, ಒಂದು ತಾಸು ಈಜು ಅಥವಾ ಸೈಕಲ್ ಸವಾರಿ, ಎಲಿವೇಟರ್ ಉಪಯೋಗಿಸುವುದಕ್ಕಿಂತ ಮೆಟ್ಟಿಲುಗಳನ್ನು ಏರುವುದು-ಇಳಿಯುವುದು ನಿಮ್ಮನ್ನು ಆರೋಗ್ಯವಂತರನ್ನಾಗಿ ಇರಿಸುತ್ತದೆ. ಜತೆಗೆ ಆರೋಗ್ಯಯುತ ಆಹಾರ ಆಯ್ಕೆಗಳನ್ನು ಮಾಡಲು ಪ್ರೇರೇಪಣೆ ನೀಡುತ್ತದೆ. ಟಿವಿ, ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ಪರದೆಯ ಮೇಲೆ ದೃಷ್ಟಿ ನೆಟ್ಟು ಆಹಾರ ಸೇವಿಸುವುದರಿಂದ ಅನ್ಯಮನಸ್ಕತೆ ಉಂಟಾಗಿ ಅಗತ್ಯಕ್ಕಿಂತ ಹೆಚ್ಚು ಆಹಾರ ಹೊಟ್ಟೆ ಸೇರಬಹುದು. ಇತರರ ಜತೆಗೆ ಕುಳಿತು ಊಟ-ಉಪಾಹಾರ ಸೇವಿಸುವುದರಿಂದ ಹಲವಾರು ಸಾಮಾಜಿಕ ಮತ್ತು ಭಾವನಾತ್ಮಕ ಪ್ರಯೋಜನಗಳಿವೆ. ಅದರಲ್ಲೂ ಮಕ್ಕಳನ್ನು ಜತೆಸೇರಿಸಿಕೊಂಡು ಆಹಾರ ಸೇವಿಸುವುದರಿಂದ ಅವರಿಗೆ ಉತ್ತಮ ಆಹಾರಾಭ್ಯಾಸ ಅನುಸರಿಸಲು ಪ್ರೇರಣೆ ಸಿಕ್ಕಿದಂತಾಗುತ್ತದೆ.ಒಂದೇ ಬಗೆಯ ಆಹಾರ ಕ್ರಮ ಎಲ್ಲರಿಗೂ ಸರಿಹೊಂದುವುದಿಲ್ಲ ಎಂಬುದನ್ನು ನೆನಪಿಡಿ. ಆದರ್ಶ ದೇಹತೂಕ, ರೋಗ ಸ್ಥಿತಿ, ಆಹಾರಾಭ್ಯಾಸಗಳು ಮತ್ತು ಜೀವನಶೈಲಿಯನ್ನು ಆಧರಿಸಿ ಆಹಾರಕ್ರಮವನ್ನು ಬದಲಾಯಿಸಬೇಕಾಗುತ್ತದೆ. ಅಲ್ಲದೆ ಒಂದು ಆಹಾರಕ್ರಮವನ್ನು ಜೀವಮಾನ ಪರ್ಯಂತ ಅನುಸರಿಸುವುದಕ್ಕೂ ಸಾಧ್ಯವಿಲ್ಲ. ಏಕೆಂದರೆ ಕಾಲಾಂತರದಲ್ಲಿ ತೂಕ ಗಳಿಕೆ ಅಥವಾ ತೂಕ ನಷ್ಟದ ಆಧಾರದಲ್ಲಿ ಅದನ್ನು ಬದಲಾಯಿಸಬೇಕಾಗುತ್ತದೆ. ಅದೇರೀತಿ ಕಡಿಮೆ ಕ್ಯಾಲೊರಿಗಳ ಆಹಾರ ಕ್ರಮವು ಸಮತೋಲಿತವಲ್ಲದ ಕಾರಣ ಮತ್ತು ದೇಹದ ಅಗತ್ಯಗಳನ್ನು ಪೂರೈಸದ ಕಾರಣ ದೀರ್ಘಕಾಲದಲ್ಲಿ ಅದರಿಂದ ನಾವು ಆರೋಗ್ಯವಂತರಾಗಿ ಇರಲು ಸಾಧ್ಯವಿಲ್ಲ. ಇಂಟರ್‌ಮಿಟೆಂಟ್ ಫಾಸ್ಟಿಂಗ್, ಅಟಿನ್ಸ್ ಡಯಟ್, ಮೆಡಿಟರೇನಿಯನ್ ಡಯಟ್, ಪಾಲಿಯೊ ಡಯಟ್ ಮತ್ತು ಕೆಟೋ ಡಯಟ್‌ನಂತಹ ವಿವಿಧ ಪಥ್ಯಾಹಾರಗಳನ್ನು ಅವುಗಳ ಪರಿಣಾಮಗಳನ್ನು ತಿಳಿಯದೆ ಅನುಸರಿಸಲಾಗುತ್ತಿದೆ. ನಿಮ್ಮ ಕುಟುಂಬ ವೈದ್ಯರು ಮತ್ತು ನೋಂದಾಯಿತ ಪಥ್ಯಾಹಾರ ತಜ್ಞರನ್ನು ಕಂಡು ಸಮಾಲೋಚಿಸುವ ಮೂಲಕ ನಿಮಗೆ ಸರಿಯಾದ ಆಹಾರಕ್ರಮವನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಆಹಾರ ದಿನಚರಿಯನ್ನು ದಾಖಲಿಸಿ ಇರಿಸಿಕೊಂಡರೆ ಎಷ್ಟು, ಏನು ನಿಮ್ಮ ಹೊಟ್ಟೆ ಸೇರುತ್ತದೆ ಎಂಬ ವಿಚಾರದಲ್ಲಿ ನಿಜವಾಗಿ ನಿಮ್ಮ ಕಣ್ಣುಗಳು ತೆರೆಯಲು ಸಾಧ್ಯ. ಇದರಿಂದ ನಿಮ್ಮ ಆಹಾರಕ್ರಮ ಎಷ್ಟು ಆರೋಗ್ಯಯುತವಾಗಿದೆ ಎಂಬ ಅರಿವು ಕೂಡ ಉಂಟಾಗುವುದಕ್ಕೆ ಸಾಧ್ಯವಿದೆ. ಸಾಧ್ಯವಾದಷ್ಟು ಪೌಷ್ಟಿಕಾಂಶಯುಕ್ತ ಆಹಾರವಸ್ತುಗಳನ್ನು ಸೇವಿಸುವ ಮೂಲಕ ನೀವು ಆರೋಗ್ಯಯುತ ಜೀವನಕ್ರಮವನ್ನು ಸೃಷ್ಟಿಸುತ್ತೀರಿ ಮತ್ತು ಅದರಿಂದ ನೀವು ನಿಮ್ಮ ಅತ್ಯುತ್ತಮ ದೇಹತೂಕವನ್ನು ಗಳಿಸಲು ಸಾಧ್ಯವಿದೆಯಲ್ಲದೆ ಜೀವನಪರ್ಯಂತ ಆರೋಗ್ಯವಾಗಿರಲು ಸಾಧ್ಯ. -ಅರುಣಾ ಮಲ್ಯ
ಹಿರಿಯ ಪಥ್ಯಾಹಾರ ತಜ್ಞೆ
ಕೆಎಂಸಿ ಆಸ್ಪತ್ರೆ, ಮಂಗಳೂರು