ಬೆಂಗಳೂರು : ಖ್ಯಾತ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರ ಆರೋಗ್ಯದ ಕುರಿತು ಊಹಾಪೋಹಗಳು ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಯಿತು. ಉಪೇಂದ್ರ ಅವರೇ ಗೊಂದಲದ ಬಳಿಕ ವಿಡಿಯೋ ಬಿಡುಗಡೆ ಮಾಡಿದ್ದು ನಾನು ಆರೋಗ್ಯವಾಗಿದ್ದು ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಹೇಳಿದ್ದಾರೆ.
ಚಿತ್ರೀಕರಣಕ್ಕೆ ತೆರಳಿದ್ದ ವೇಳೆ ಉಪೇಂದ್ರ ಅವರು ಅನಾರೋಗ್ಯಕ್ಕೆ ಗುರಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದ್ದು, ಸಾಮಾಜಿಕ ತಾಣಗಳಲ್ಲಿ ಸುದ್ದಿ ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಆ ಬಳಿಕ ಉಪೇಂದ್ರ ಅವರು ಚಿತ್ರೀಕರಣಕ್ಕೆ ತೆರಳಿದ್ದು ವಿಡಿಯೋ ಬಿಡುಗಡೆ ಮಾಡಿ ಗೊಂದಲ ನಿವಾರಿಸಿದ್ದಾರೆ.
”ನಮಸ್ಕಾರ… ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿದ್ದೇವೆ. ನಮ್ಮ ಚಿತ್ರ ತಂಡದ ಎಲ್ಲರೂ ಇದ್ದಾರೆ. ನೋಡಿ ಇಲ್ಲೇ ಥ್ರಿಲ್ಲರ್ ಮಂಜು ಅವರೂ ಇದ್ದಾರೆ. ನಾನು ಆರಾಮಾಗಿದ್ದೇನೆ. ಸ್ವಲ್ಪ ಧೂಳು ಮತ್ತು ಹೊಗೆಯ ವಾತಾವರಣವಿತ್ತು. ಸ್ವಲ್ಪ ಕೆಮ್ಮಿದೆ ಅಷ್ಟೇ” ಎಂದು ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳ ಗೊಂದಲ ನಿವಾರಿಸಿದ್ದಾರೆ.
ಅವರು ಆರೋಗ್ಯವಾಗಿದ್ದು, ತಪಾಸಣೆ ಬಳಿಕ ಅವರು ಶೂಟಿಂಗ್ ಗೆ ತೆರಳಿದರು ಎಂದು ನೆಲಮಂಗಲ ಹರ್ಷ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.