Advertisement

ಗರ್ಭಿಣಿಗೆ ಬೇಸಿಗೆ ಪಾಠ

09:17 AM Apr 25, 2019 | Hari Prasad |

ಉಸ್ಸಪ್ಪಾ, ಎಂಥ ಬಿಸಿಲು..! ಮನೆಗೆ ಬಂದು ಫ್ಯಾನ್‌, ಹಾಕ್ಕೊಂಡು ಹೀಗೆ ಹೇಳ್ಳೋ ಡೈಲಾಗನ್ನು, ಬರೀ ಬೇಸಿಗೆಯಲ್ಲಿ ಮಾತ್ರ ಕೇಳಲು ಸಾಧ್ಯ. ನಾವೇ ಹಿಂಗಂದ್ರೆ, ಎರಡು ಜೀವ ಸಾಕಿಕೊಂಡಿರುವ ಗರ್ಭಿಣಿಯರ ಕತೆ..? ಬೇಸಿಗೆಯಲ್ಲಿ ಗರ್ಭಿಣಿಯರ ಆರೋಗ್ಯ ಹೇಗಿರಬೇಕು ಎನ್ನುವ ಮಾಹಿತಿ ಇಲ್ಲಿದೆ…

Advertisement

ಬೇಸಿಗೆಯಲ್ಲಿ ದೇಹಾರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಯಾಕೆಂದರೆ, ಈ ಸಮಯದಲ್ಲಿ ಕಾಯಿಲೆಗಳು ಕಾಡುವುದು ಸಹಜ. ಗರ್ಭಿಣಿಯರಂತೂ, ಉಳಿದವರಿಗಿಂತ ಎರಡು ಪಟ್ಟು ಜಾಸ್ತಿಯೇ ಆರೋಗ್ಯದ ಕಡೆ ಗಮನ ಹರಿಸಬೇಕು. ಗರ್ಭಿಣಿಯರಲ್ಲಿ ಸ್ರವಿಸುವ ಹಾರ್ಮೋನ್‌ಗಳ ಕಾರಣದಿಂದ ಅವರ ದೇಹದ ತಾಪಮಾನ ಸಾಮಾನ್ಯರಿಗಿಂತ ಕೊಂಚ ಹೆಚ್ಚಿರುತ್ತದೆ. ಹೀಗಿರುವಾಗ, ಹೊರಗಿನ ತಾಪ, ಅವರನ್ನು ತಾಕದಂತೆ ನೋಡಿಕೊಳ್ಳಬೇಕು.

ಆಹಾರ ಸೇವನೆ ಹೀಗಿರಲಿ…
– ಮಜ್ಜಿಗೆ, ಕಿತ್ತಳೆ ಹಣ್ಣಿನ ರಸ, ಕಲ್ಲಂಗಡಿ ಹಣ್ಣು, ಹಸಿರು ಸೊಪ್ಪಿನ ಸೂಪ್‌ಗಳು, ರಾಗಿ ಮಾಲ್ಟ್, ಲಾವಂಚ- ಕಾಮಕಸ್ತೂರಿ ಬೀಜ ಹಾಕಿದ ನೀರನ್ನು ಆಗಾಗ ಸೇವಿಸುತ್ತಿರಿ.

– ಲಘು ಪೌಷ್ಟಿಕ ಆಹಾರಗಳಾದ ಹಸಿರು ತರಕಾರಿಗಳು, ಮೊಳಕೆ ಕಾಳುಗಳು, ಬೇಯಿಸಿದ ಮೊಟ್ಟೆ, ರಾಗಿ/ ಜೋಳದ ಅಂಬಲಿ ಸೇವಿಸುವುದು ಉತ್ತಮ.

– ಮಾಂಸ, ಮಸಾಲೆ (ಬೆಳ್ಳುಳ್ಳಿ, ಹಸಿಮೆಣಸು, ಶುಂಠಿ), ಅತಿಖಾರ, ಹುಳಿಯ ಪದಾರ್ಥಗಳನ್ನು ತ್ಯಜಿಸಿ.

Advertisement

– ಒಂದೇ ಸಲ ಗಡದ್ದು ಊಟ ಮಾಡಬೇಡಿ. ಸೇವಿಸುವ ಆಹಾರವನ್ನು ವಿಂಗಡಿಸಿ, ಗಂಟೆ- ಎರಡು ಗಂಟೆಗೊಮ್ಮೆ ಸ್ವಲ್ಪ ಸ್ವಲ್ಪ ಸೇವಿಸಿ.

ಬೇಸಿಗೆಯಲ್ಲಿ ಗರ್ಭಿಣಿಯರನ್ನು ಕಾಡುವ ಸಮಸ್ಯೆಗಳು
1.ಹೈಡ್ರೇಶನ್‌
ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದಕ್ಕೆ ಡಿಹೈಡ್ರೇಶನ್‌ ಅನ್ನುತ್ತಾರೆ. ಬಾಯಾರಿಕೆ, ಸುಸ್ತು, ಇವು ಡಿಹೈಡ್ರೇಶನ್‌ನ ಲಕ್ಷಣಗಳು. ಗರ್ಭಿಣಿಯರು ನೀರಿನ ಅಂಶವಿರುವ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು. ಮೂಸಂಬಿ, ಕಿತ್ತಳೆ, ಕಲ್ಲಂಗಡಿಯಂಥ ಹಣ್ಣುಗಳನ್ನು ಸೇವಿಸಿ.

2. ಚರ್ಮದ ಕಾಯಿಕೆ
ಬೆವರಿನ ಕಾರಣದಿಂದ ಗರ್ಭಿಣಿಯರಲ್ಲಿ, ಹೊಟ್ಟೆಯ ಕೆಳಗೆ, ಸ್ತನದ ಸುತ್ತ ಚರ್ಮದ ತೊಂದರೆ ಕಾಣಿಸಕೊಳ್ಳಬಹುದು. ಸ್ನಾನದ ನೀರಿಗೆ ಬೇವಿನೆಲೆಯ ಕಷಾಯ, ಲಾವಂಚದ ನೀರು, ಚಿಟಿಕೆ ಶ್ರೀಗಂಧ ಹಾಗೂ ಅರಿಶಿಣ ಹಾಕಿ ಸ್ನಾನ ಮಾಡಿ. ಸಡಿಲವಾದ, ದೇಹಕ್ಕೆ ಆರಾಮ ನೀಡುವ ಉಡುಪುಗಳನ್ನು ಧರಿಸಿ.

3. ಪಾದಗಳ ಊತ (Ankle Odema)
ಗರ್ಭಿಣಿಯರಲ್ಲಿ 7ನೇ ತಿಂಗಳ ನಂತರ ಕಾಣಿಸಕೊಳ್ಳುವ ಪಾದದ ಊತ, ಬೇಸಿಗೆಯಲ್ಲಿ ಹೆಚ್ಚಾಗಿ ಬಾಧಿಸುತ್ತದೆ. ಅದನ್ನು ತಡೆಯಲು ಅಹಾರಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಉಪ್ಪು, ಉಪ್ಪಿನಕಾಯಿ, ಹಪ್ಪಳ, ಕರಿದ ಪದಾರ್ಥ, ಜಂಕ್‌ಫ‌ುಡ್‌ ಬೇಡವೇ ಬೇಡ. ಸಾಮಾನ್ಯ ಉಪ್ಪಿನ ಬದಲಾಗಿ ಸೈಂದವ ಲವಣ ಬಳಸಿ. ಪೊಟ್ಯಾಶಿಯಂ ಅಂಶ ಹೆಚ್ಚಿರುವ ಕಿತ್ತಳೆ, ಬಾಳೆಹಣ್ಣು, ಸೌತೆಕಾಯಿ, ಒಣ ದ್ರಾಕ್ಷಿ ಸೇವಿಸಿ. ಒಂದೆಡೆಯೇ ಹೆಚ್ಚು ಸಮಯ ನಿಂತು ಕೆಲಸ ಮಾಡಬೇಡಿ. ಊಟವಾದ ಮೇಲೆ ಸ್ವಲ್ಪ ಸಮಯ ವಿರಮಿಸಿ. ಮಲಗುವಾಗ ಕಾಲುಗಳ ಕೆಳಗೆ ದಿಂಬನ್ನು ಇಟ್ಟು, ಕಾಲುಗಳು ಎತ್ತರ ಇರುವಂತೆ ನೋಡಿಕೊಳ್ಳಿ.

4.ಅತಿ ಉಷ್ಣತೆ (Hyperaemia)
ಗರ್ಭಿಣಿಯರಲ್ಲಿ ಮೊದಲೇ ಹಾರ್ಮೋನ್‌ಗಳ ಬದಲಾವಣೆಯ ಕಾರಣದಿಂದ ದೇಹದ ಉಷ್ಣತೆ ಹೆಚ್ಚಿರುತ್ತದೆ. ಬೇಸಿಗೆಯ ಬಿಸಿ ಅದಕ್ಕೆ ಮತ್ತಷ್ಟು ಇಂಬು ಕೊಡುತ್ತದೆ. ಗರ್ಭಾವಸ್ಥೆಯ ಮೊದಲ ಮೂರು ತಿಂಗಳು ಹೀಗಾದಾಲ್ಲಿ ಭ್ರೂಣದ ಬೆಳವಣಿಗೆಯಲ್ಲಿ ತೊಡಕುಂಟಾಗುವ ಅಪಾಯವಿರುತ್ತದೆ. ಆದ ಕಾರಣ ಗರ್ಭಿಣಿಯರು, ಬಿಸಿಲ ಝಳಕ್ಕೆ ತಮ್ಮನ್ನು ಒಡ್ಡಿಕೊಳ್ಳದಿದ್ದರೆ ಉತ್ತಮ. ದೇಹವನ್ನು ತಂಪುಗೊಳಿಸುವ ಲಾವಂಚ, ಕಾಮಕಸ್ತೂರಿಯ ಬೀಜ, ಗಸಗಸೆಯನ್ನು ಆಗಾಗ್ಗೆ ಸೇವಿಸಬಹುದು.

ಹಿತಮಿತವಾಗಿರಲಿ
– ಗರ್ಭಿಣಿಯರಿಗೆ ವ್ಯಾಯಾಮ ಅಗತ್ಯ. ಬೇಸಿಗೆಯಲ್ಲಿ ಯೋಗ ಅಥವಾ ವಾಕಿಂಗ್‌ನಂಥ ಲಘು ವ್ಯಾಯಾಮ ಮಾಡಿದರೆ ಸಾಕು.
– ಪ್ರಾಣಾಯಾಮದಿಂದ ಮನಸ್ಸು, ದೇಹ ಉಲ್ಲಸಿತವಾಗಿರುತ್ತದೆ.
– ಸಡಿಲವಾದ ಮೆತ್ತನೆಯ ಹತ್ತಿಯ ಉಡುಪುಗಳನ್ನು ಧರಿಸಿ.
– ಆದಷ್ಟು ತಿಳಿಯ ಬಣ್ಣದ ಬಟ್ಟೆಯನ್ನೇ ಧರಿಸಿ. ಕಾರಣ, ಅವು ಮನಸ್ಸಿಗೆ ಮುದ ನೀಡುತ್ತವೆ.
– ಮಧ್ಯಾಹ್ನದ ಬಿಸಿಲಿನಲ್ಲಿ ಹೊರಗೆ ಹೋಗಬೇಡಿ.
– ಚರ್ಮದ ಸಮಸ್ಯೆಯಿಂದ ಮುಕ್ತಿ ಪಡೆಯಲು ಸ್ನಾನದ ನೀರಿಗೆ ಬೇವಿನೆಲೆಯ ಕಷಾಯ, ಲಾವಂಚದ ನೀರು, ಚಿಟಿಕೆ ಶ್ರೀಗಂಧ ಹಾಗೂ ಅರಿಶಿಣ ಹಾಕಿ ಸ್ನಾನ ಮಾಡಿ.
– ಅತಿಯಾದ ಬಿಸಿ ನೀರಿನ ಸ್ನಾನ ಬೇಡ.

— ಡಾ. ಪೂರ್ಣಿಮಾ ಜಮಖಂಡಿ

Advertisement

Udayavani is now on Telegram. Click here to join our channel and stay updated with the latest news.

Next