Advertisement
ರಾಜ್ಯದಲ್ಲಿ ನವಜಾತ ಶಿಶುಗಳ ಮತ್ತು ತಾಯಂದಿರ ಮರಣ ಪ್ರಮಾಣ ಕುಗ್ಗಿಸುವ ನಿಟ್ಟಿನಲ್ಲಿ ಆರೋಗ್ಯ ಕೇಂದ್ರಗಳ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಕಾರ್ಯಚಟುವಟಿಕೆಯನ್ನು ಜ.1ರಿಂದ ಕಾಗದ ಮುಕ್ತಗೊಳಿಸಲು (ಪೇಪರ್‌ಲೆಸ್) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯಾದ್ಯಂತ 7,737 ಕಿರಿಯ ಆರೋಗ್ಯ ಸಹಾಯಕಿಯರಿಗೆ ಟ್ಯಾಬ್‌ಗಳನ್ನು ಒದಗಿಸಿದೆ.
Related Articles
Advertisement
ಈ ಟ್ಯಾಬ್ ಕೇವಲ ಗರ್ಭಿಣಿ, ತಾಯಿ ಹಾಗೂ ಮಕ್ಕಳ ಮಾಹಿತಿ ಸಂಗ್ರಹಣೆಗೆ ಸೀಮಿತವಾಗದೇ, ಬದಲಾದ ಜೀವನ ಶೈಲಿಯಿಂದ ಗ್ರಾಮೀಣ ಭಾಗದಲ್ಲಿ ಹೆಚ್ಚಾಗುತ್ತಿರುವ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್‌ನಂತಹ ಅಸಾಂಕ್ರಾಮಿಕ ರೋಗಗಳ ಸಮೀಕ್ಷೆಗೆ ನೆರವಾಗಲಿದೆ. ಗ್ರಾಮೀಣ ಭಾಗದ 30 ವರ್ಷ ಮೇಲ್ಪಟ್ಟವರನ್ನು ಅಸಾಂಕ್ರಾಮಿಕ ರೋಗಗಳ ಪರೀಕ್ಷೆ ನಡೆಸಿ ರೋಗ ಪತ್ತೆಯಾದಲ್ಲಿ ಅವರ ಮಾಹಿತಿಯನ್ನು ದಾಖಲಿಸಿಕೊಂಡು ನಿರಂತರವಾಗಿ ಅವರ ಆರೋಗ್ಯ ಹಾಗೂ ಚಿಕಿತ್ಸೆಯ ಮಾಹಿತಿ ಪಡೆಯಲು ಕೂಡಾ ಈ ಟ್ಯಾಬ್‌ಗಳನ್ನು ಉಪಯೋಗಿಸಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಒಂದಂಕಿ ಇಳಿದ ನವಜಾತ ಶಿಶು ಮರಣ ದರರಾಜ್ಯದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಕಳೆದ 3 ವರ್ಷಕ್ಕಿಂತ ಕಡಿಮೆಯಾಗಿದೆ. ಹುಟ್ಟಿದ ದಿನದಿಂದ 28 ದಿನಗಳ ಒಳಗೆ ಮರಣ ಹೊಂದುವ ಮಕ್ಕಳ ಪ್ರಮಾಣವನ್ನು ನವಜಾತ ಶಿಶುಗಳ ಮರಣ ಪ್ರಮಾಣ ಎಂದು ಪರಿಗಣಿಸಲಾಗುತ್ತದೆ. ಸಾವಿರ ಮಕ್ಕಳಿಗೆ ಎಷ್ಟು ಮಕ್ಕಳು ಮೃತಪಟ್ಟಿದ್ದಾರೆ ಎಂಬುದರ ಮೇಲೆ ಸರಾಸರಿ ಲೆಕ್ಕ ಹಾಕಲಾಗುತ್ತದೆ. ಆರೋಗ್ಯ ಇಲಾಖೆ ವರದಿಯಂತೆ (ಎಚ್‌ಎಂಐಎಸ್) ಕಳೆದ 3 ವರ್ಷ ನವಜಾತ ಶಿಶುಗಳ ಮರಣ ಪ್ರಮಾಣ 13 (ಒಂದು ಸಾವಿರಕ್ಕೆ) ಇತ್ತು, ಆದರೆ, ಈ ವರ್ಷ 12ಕ್ಕೆ ಇಳಿದಿದೆ. ಜಿಲ್ಲಾವಾರು ಕಲಬುರಗಿ ಮತ್ತು ಹಾಸನ ಪ್ರಥಮ ಸ್ಥಾನದಲ್ಲಿದ್ದರೆ, ಬೆಂಗಳೂರು ನಗರ ಕೊನೆಯ ಸ್ಥಾನದಲ್ಲಿದೆ. ಮನೆ ಹೆರಿಗೆ ಕಡಿಮೆಯಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರ ನಿರಂತರವಾಗಿ ಗರ್ಭಿಣಿಯರಿಗೆ ಮಾಹಿತಿ ನೀಡುತ್ತಿದ್ದಾರೆ. ಇದರಿಂದಾಗಿ ಶಿಶು ಮತ್ತು ತಾಯಿ ಮರಣ ಪ್ರಮಾಣ ಕಡಿಮೆಯಾಗಿದೆ. ಟ್ಯಾಬ್ ವಿತರಣೆಯು ಆರೋಗ್ಯ ಸಹಾಯಕಿಯರಿಗೆ ಸಾಕಷ್ಟು ನೆರವಾಗಲಿದೆ. ಪ್ರಸ್ತುತ ತರಬೇತಿ ನೀಡುತ್ತಿದ್ದು, ಜ.1ರಿಂದ ಟ್ಯಾಬ್ ಬಳಕೆ ಆರಂಭವಾಗಲಿದ್ದು, ಇಲಾಖೆಯ ಹೊಸ ಯೋಜನೆಗಳ ಡಿಜಿಟಲ್ ಮಾಹಿತಿ ಸಂಗ್ರಹಣೆಗೂ ಇದನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.
– ಡಾ.ಪ್ರಭುದೇವ್ ಗೌಡ, ಮಕ್ಕಳ ಆರೋಗ್ಯ ವಿಭಾಗ ಉಪನಿರ್ದೆಶಕರು – ಜಯಪ್ರಕಾಶ್ ಬಿರಾದಾರ್