Advertisement

ಮನೆಬಾಗಿಲಿಗೆ ಆರೋಗ್ಯ ಸೇವೆ: ಸಂಚಾರಿ ಘಟಕಗಳಿಗೆ ಚಾಲನೆ

11:12 AM Mar 26, 2017 | Harsha Rao |

ಬೆಂಗಳೂರು: ಜನರ ಮನೆಬಾಗಿಲಿಗೆ ಆರೋಗ್ಯ ಭಾಗ್ಯ ತಲುಪಿಸುವ ಉದ್ದೇಶದಿಂದ ಆರೋಗ್ಯ ಇಲಾಖೆ ರಾಜ್ಯದಲ್ಲಿ 78 ಸಂಚಾರಿ ಆರೋಗ್ಯ ಘಟಕಗಳಿಗೆ ಚಾಲನೆ ನೀಡಿದೆ. ವಿಧಾನಸೌಧದ ಮುಂಭಾಗದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ಸಂಚಾರಿ ಆರೋಗ್ಯ ಘಟಕಗಳಿಗೆ ಚಾಲನೆ ನೀಡಿದರು. ಪ್ರತಿ ಸಂಚಾರಿ ಘಟಕದಲ್ಲಿ ಒಬ್ಬ ವೈದ್ಯ, ಸಹಾಯಕ, ಲ್ಯಾಬ್‌ ಸಿಬ್ಬಂದಿ ಇರುವುದರ ಜತೆಗೆ ಅಗತ್ಯ ಔಷಧವೂ ಲಭ್ಯವಿರುತ್ತದೆ.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರಸ್ತುತ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆಸ್ಪತ್ರೆಗಳಿಗಿಂತಲೂ ಉತ್ತಮ ಸೇವೆ ಸಿಗುತ್ತಿದ್ದು, ಆದರೂ ಜನ ಖಾಸಗಿ ಆಸ್ಪತ್ರೆಗಳ ವ್ಯಾಮೋಹ ಬಿಟ್ಟಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ಎಡತಾಕುವ ಜನರ ಪ್ರವೃತ್ತಿಗೆ ಕಡಿವಾಣ ಹಾಕಬೇಕಾಗಿದೆ. ಮೆರಿಟ್‌ ಆಧಾರದ ಮೇಲೆ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಕ ಮಾಡಲಾಗುತ್ತದೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿರುವ ಬಹುತೇಕ ವೈದ್ಯರು ಡೊನೇಷನ್‌ ಕೊಟ್ಟು ಬಂದವರಾಗಿರುತ್ತಾರೆ. ಈ ವಿಚಾರವನ್ನು ಜನರ ಗಮನಕ್ಕೆ ತಂದು ಅವರನ್ನು ಸರ್ಕಾರಿ
ಆಸ್ಪತ್ರೆಯತ್ತ ಕರೆತರುವ ಪ್ರಯತ್ನವಾಗಬೇಕಿದೆ ಎಂದರು.

ಸರ್ಕಾರಿ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಲಭ್ಯವಿದ್ದರೂ ಜನರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣಕ್ಕಾಗಿ ಅರ್ಜಿ ಹಾಕುತ್ತಾರೆ. ಎಲ್ಲ ಸೇವೆಯೂ ಸರ್ಕಾರಿ ಆಸ್ಪತ್ರೆಯÇÉೇ ಸಿಗುವಾಗ ಖಾಸಗಿ
ಆಸ್ಪತ್ರೆಗೆ ದಾಖಲಾಗುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಮಾತನಾಡಿ, ಎಲ್ಲರಿಗೂ ಆರೋಗ್ಯ ಭಾಗ್ಯ ಸಿಗಲಿ ಎಂಬ ದೃಷ್ಟಿಯಿಂದ 500 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಿ ಸಂಚಾರಿ ಆರೋಗ್ಯ ಘಟಕ ಸ್ಥಾಪಿಸಲಾಗುತ್ತಿದೆ. ಪ್ರಸ್ತುತ 78 ಘಟಕಗಳನ್ನು ಆರಂಭಿಸಲಾಗಿದ್ದು, ಇನ್ನೂ 130 ಘಟಕಗಳನ್ನು ಶೀಘ್ರವೇ ಆರಂಭಿಸಲಾಗುವುದು. ಆ ಮೂಲಕ ಜನರ ಮನೆಬಾಗಿಲಿಗೆ ಆರೋಗ್ಯ ಸೇವೆ ಕಲ್ಪಿಸಲು ಸರ್ಕಾರ ಪ್ರಯತ್ನಿಸುತ್ತಿದ್ದು, ಇದರ ಅನುಕೂಲ ಪಡೆದುಕೊಳ್ಳಬೇಕು ಎಂದರು.

ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌, ಆಯುಕ್ತ ಸುಬೋದ್‌ ಯಾದವ್‌, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ.ರತನ್‌ ಕೇಲ್ಕರ್‌, ಯೋಜನಾ ನಿರ್ದೇಶಕಿ ಡಾ.ಪಿ.ಸರೋಜಾ, ಆರೋಗ್ಯ ಮತ್ತು
ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಪಿ.ಎಲ್‌.ನಟರಾಜ್‌ ಮತ್ತಿತರರು ಹಾಜರಿದ್ದರು.

ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಯಾರೂ ಲಘುವಾಗಿ ಮಾತನಾಡುವುದು ಸರಿಯಲ್ಲ. ಖಾಸಗಿ ಆಸ್ಪತ್ರೆಗಳಿಗೆ ಕಡಿಮೆ ಇಲ್ಲದಂತೆ ಶ್ರೇಷ್ಠತೆಯಿಂದಲೇ ಅವು ಕೆಲಸ ಮಾಡುತ್ತಿವೆ. ಅತ್ಯುತ್ತಮ ವೈದ್ಯರು, ತಜ್ಞ ವೈದ್ಯರೂ ಲಭ್ಯರಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿ ಸಾರ್ವಜನಿಕರಿಗೆ ಗೌರವ ಸಿಗುವ ರೀತಿಯಲ್ಲಿ ಕೆಲಸ ಮಾಡಿದರೆ ಮುಂದೆ ಖಾಸಗಿಗಿಂತ ಸರ್ಕಾರಿ ಆಸ್ಪತ್ರೆಗಳೇ ಹೆಚ್ಚು ಜನಪ್ರಿಯವಾಗುವುದರಲ್ಲಿ ಸಂಶಯವಿಲ್ಲ.

Advertisement

– ಕೆ.ಆರ್‌.ರಮೇಶ್‌ಕುಮಾರ್‌, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next