ಮೈಸೂರು: ಮುಖ್ಯಮಂತ್ರಿಗಳು ಹಸಿರು ಪಟಾಕಿ ಸಿಡಿಸಲು ಅನುಮತಿ ನೀಡಿದ್ದಾರೆ. ಆದರೆ ಹಸಿರು ಪಟಾಕಿ ಅಂದರೆ ಏನು ಎಂದು ನನಗೂ ಗೊತ್ತಿಲ್ಲ. ಈ ಬಗ್ಗೆ ನಾನು ತಿಳಿದುಕೊಂಡು ಹೇಳುತ್ತೇನೆ ಎಂದು ರಾಜ್ಯದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟಾಕಿ ನಿಷೇಧದ ಬಗ್ಗೆ ನಮ್ಮ ಇಲಾಖೆಯಿಂದ ಮಾರ್ಗಸೂಚಿ ವರದಿ ಬಂದಿತ್ತು. ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸರ್ಕಾರಕ್ಕೆ ಸಲ್ಲಿಸಿದ್ದೆ. ಆ ನಂತರ ಸಿಎಂ ಹಸಿರು ಪಟಾಕಿ ಸಿಡಿಲು ಅನುಮತಿ ನೀಡಿದ್ದಾರೆ. ಆದರೆ ಹಸಿರು ಪಟಾಕಿ ಅಂದ್ರೇನು ಅಂತ ನನಗೂ ಗೊತ್ತಿಲ್ಲ ಎಂದು ಹೇಳಿ ಪಟಾಕಿ ಗೊಂದಲಕ್ಕೆ ಮತ್ತಷ್ಟು ತುಪ್ಪ ಸುರಿದರು.
ಚುನಾವಣೆ ರ್ಯಾಲಿಗಳಲ್ಲಿ ಮಾಸ್ಕ್ -ಸಾಮಾಜಿಕ ಅಂತರ ಕಾಯ್ದುಕೊಳ್ಳದ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದಲ್ಲಿ ನಾನು ಕೂಡಾ ಅಸಹಾಯಕ. ಕೋವಿಡ್-19 ಬಗ್ಗೆ ಈಗಾಗಲೇ ಮಾರ್ಗಸೂಚಿ ಇದೆ. ನಾನು ಕೂಡ ಕಡ್ಡಾಯವಾಗಿ ಪಾಲಿಸುವಂತೆ ಎಲ್ಲರಿಗೂ ಹೇಳುತ್ತಿದ್ದೇನೆ. ಇದು ನಮಗೂ ಅನ್ವಯ ಆಗುತ್ತದೆ. ರಾಜಕೀಯ ಪಕ್ಷಗಳ ರ್ಯಾಲಿಗಳ ವಿಚಾರದಲ್ಲೂ ಸರ್ಕಾರಕ್ಕೆ ಸೂಚನೆ ಕೊಟ್ಟಿದ್ದೆ. ಆದರೆ ಇದು ಪಾಲನೆ ಆಗಿಲ್ಲ ಎಂದು ನನಗೂ ಬೇಸರವಿದೆ ಎಂದರು.
ಇದನ್ನೂ ಓದಿ:ನನಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ: ಡಿಕೆಶಿ ವಿರುದ್ಧ ಅಸಮಧಾನ ತೋರಿದ ಅಖಂಡ ಶ್ರೀನಿವಾಸ್
ಈ ವಿಚಾರದಲ್ಲಿ ರಾಜಕೀಯ ಪಕ್ಷಗಳು ಹಾಗೂ ನಾಯಕರಿಗೆ ಸಾಮೂಹಿಕ ಜವಾಬ್ದಾರಿ ಇರಬೇಕು. ಅದನ್ನು ಮರೆತಿರುವುದು ದುರಾದೃಷ್ಟ. ಈ ಬಗ್ಗೆ ದಂಡ ಹಾಕಲು ಅಧಿಕಾರಿಗಳಿಗೆ ತಿಳಿಸುತ್ತೇನೆ. ದಂಡ ಎಲ್ಲರಿಗೂ ಅನ್ವಯ ಆಗುತ್ತದೆ ಎಂದು ಹೇಳಿದರು.