Advertisement

ಆರೋಗ್ಯ, ವೈದ್ಯಕೀಯ ಶಿಕ್ಷಣ; ಶ್ರೀಸಾಮಾನ್ಯನ ಮನೆ ಬಾಗಿಲಿಗೆ ಆರೋಗ್ಯ ಸೇವೆ

09:27 PM Feb 17, 2023 | Team Udayavani |

-ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಲ್ಲಿ ಆರೋಗ್ಯ ಸುಧಾರಣೆಗೆ 720 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾರ್ಯಕ್ರಮ
-ಗ್ರಾಮೀಣ ಜನತೆಗೆ 2 ಬಾರಿ ಆರೋಗ್ಯ ಶಿಬಿರ ಆಯೋಜಿಸಲು ಕ್ರಮ
-ತೀವ್ರತರ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಜನರ ಆರೋಗ್ಯ ಕಾಪಾಡುವ ಗುರಿ ಸರ್ಕಾರದ್ದು
-ದೀರ್ಘ‌ಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವವರ ಮನೆ ಬಾಗಲಿಗೆ ಔಷಧಿ ತಲುಪಿಸಲು ಕ್ರಮ
– ಕ್ಯಾನ್ಸರ್‌ ಪತ್ತೆಗೆ ಅಗತ್ಯವಿರುವ ಸಾಧನಗಳ ಖರೀದಿಗೆ 12 ಕೋಟಿ ರೂ. ಅನುದಾನ
-ಸವಣೂರಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆ

Advertisement

ಹೊಸ ಯೋಜನೆಗಳು
– ಹಳ್ಳಿಗಳಲ್ಲಿ ಆರೋಗ್ಯ ಶಿಬಿರ ನಡೆಸಲು “ಮನೆ ಮನೆಗೆ ಆರೋಗ್ಯ’
– ಸ್ತನ, ಬಾಯಿ, ಗರ್ಭಕಂಠ ಕ್ಯಾನ್ಸರ್‌ ಪತ್ತೆಗೆ “ಜೀವಸುಧೆ’
– 6 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆಗೆ “ವಾತ್ಸಲ್ಯ’
-“ಕರ್ನಾಟಕ ಮೆದುಳು ಆರೋಗ್ಯ ಯೋಜನೆ’ 25 ಕೋಟಿ ರೂ. ವೆಚ್ಚದಲ್ಲಿ ಇಡೀ ರಾಜ್ಯಕ್ಕೆ ವಿಸ್ತರಣೆ

“ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ’ ಘೋಷಣೆಯೊಂದಿಗೆ ಕಳೆದ ಬಾರಿ ಆರೋಗ್ಯ ಸೇವೆಗಳನ್ನು ಕೆಳಹಂತದವರೆಗೆ ಬಲುಪಡಿಸಲು ಕ್ರಮ ಕೈಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆವರು ಈ ಬಾರಿ ಆರೋಗ್ಯ ಸೇವೆಗಳನ್ನು ಗ್ರಾಮೀಣ ಭಾಗದ ಪ್ರತಿ ಮನೆಗೆ ತೆಗೆದುಕೊಂಡು ಹೋಗಲು ಯೋಜಿಸಿದ್ದಾರೆ. 2023-24ನೇ ಸಾಲಿನ ಬಜೆಟ್‌ನಲ್ಲಿ “ಮನೆ ಮನೆಗೆ ಆರೋಗ್ಯ’ ಕಾರ್ಯಕ್ರಮ ಘೋಷಿಸಿದ್ದಾರೆ. ಜೊತೆಗೆ ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಲ್ಲಿ ಆರೋಗ್ಯ ಸುಧಾರಣೆಗೆ 720 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ.

ಮನೆ ಮನೆಗೆ ಆರೋಗ್ಯ ಕಾರ್ಯಕ್ರಮದಡಿ ಪ್ರಸಕ್ತ ಸಾಲಿನಲ್ಲಿ ಗ್ರಾಮೀಣ ಜನತೆಗೆ ಎರಡು ಬಾರಿ ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಆಯೋಜಿಸಲು ಘೋಷಿಸಲಾಗಿದೆ. ಈ ಮೂಲಕ ತೀವ್ರತರ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಜನರ ಆರೋಗ್ಯ ಕಾಪಾಡುವ ಗುರಿ ಹೊಂದಲಾಗಿದೆ. ಇದರೊಂದಿಗೆ ಈ ಯೋಜನೆಯಡಿ ದೀರ್ಘ‌ಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವವರ ಮನೆ ಬಾಗಲಿಗೆ ಔಷಧಿಗಳನ್ನು ತಲುಪಿಸಲು ಕ್ರಮ ವಹಿಸಲಾಗುವುದು.

ಜೀವಸುಧೆ
ಮಕ್ಕಳ ಆರೋಗ್ಯ ರಕ್ಷಣೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವರ್ಷಕ್ಕೆರಡು ಬಾರಿ ನವಜಾತ ಶಿಶುಗಳಿಂದ 6 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆಗೆ “ವಾತ್ಸಲ್ಯ’ ಯೋಜನೆ ಘೋಷಿಸಲಾಗಿದೆ. ಸ್ತನ, ಬಾಯಿ ಮತ್ತು ಗರ್ಭಕಂಠದ ಕ್ಯಾನ್ಸರ್‌ ಪತ್ತೆ ಹಚ್ಚಲು “ಜೀವಸುಧೆ’ ಎಂಬ ವ್ಯಾಪಕ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುವುದು. ಕ್ಯಾನ್ಸರ್‌ ಪತ್ತೆಗೆ ಅಗತ್ಯವಿರುವ ಸಾಧನಗಳ ಖರೀದಿಗೆ 12 ಕೋಟಿ ರೂ. ಅನುದಾನ ನೀಡಲಾಗಿದೆ.

Advertisement

ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಔಷಧಿಗಳನ್ನು ಒದಗಿಸುತ್ತಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು ರಾಜ್ಯಾದ್ಯಂತ ಇನ್ನಷ್ಟು ಹೆಚ್ಚಿಸಲಾಗುವುದು. ಜನಸಾಮಾನ್ಯರಲ್ಲಿ ಮೆದುಳಿನ ಆರೋಗ್ಯ ಕಾಪಾಡಲು ಮತ್ತು ಅದರ ಬಗ್ಗೆ ಅರಿವು ಮೂಡಿಸಲು ನಿಮಾªನ್ಸ್‌ ಸಹಯೋಗದೊಂದಿಗೆ “ಕರ್ನಾಟಕ ಮೆದುಳು ಆರೋಗ್ಯ ಯೋಜನೆ’ಯನ್ನು 25 ಕೋಟಿ ರೂ. ವೆಚ್ಚದಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು. ರಾಜ್ಯದ ತಾಲೂಕು ಆಸ್ಪತ್ರೆಗಳಲ್ಲಿ ಹೆರಿಗೆಯಾದ ತಾಯಿಂದಿರು ಮತ್ತು ನವಜಾತ ಶಿಶುಗಳಿಗೆ ಸುರಕ್ಷಿತವಾಗಿ ಮನೆಗೆ ತಲುಪಿಸಲು ಸಾರಿಗೆ ಸೌಲಭ್ಯ ಕಲ್ಪಿಸಲು 12.45 ಕೋಟಿ ರೂ. ವೆಚ್ಚದಲ್ಲಿ ಹೊಸ “ನಗು ಮಗು’ ವಾಹನಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಲೋಕಲ್‌ ಆಗಿ ಪ್ರಯೋಗಾಲಯ
ಕೇವಲ ನಗರಗಳಿಗೆ ಸೀಮಿತವಾಗಿದ್ದ ಕೆಲವೊಂದು ಕಾಯಿಲೆಗಳು ಹಳ್ಳಿಗಳಿಗೂ ಪ್ರವೇಶಿಸಿದ್ದು, ಅವರಿಗೆ ಪರೀಕ್ಷೆ ಮಾಡಿಸಿಕೊಳ್ಳಲು ದೂರದ ಊರುಗಳಿಗೆ ಹೋಗುವ ಸ್ಥಿತಿ ಉಂಟಾಗಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಹಾಗೂ ಶ್ರೀಸಾಮಾನ್ಯರ ಕೈಗೆಟಕುವ ದರದಲ್ಲಿಯೇ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಲು ಈ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಇದಕ್ಕಾಗಿಯೇ ಸ್ಥಳೀಯವಾಗಿಯೇ ಪ್ರಯೋಗಾಲಯಗಳ ಸೇವೆಗಳನ್ನು ಒದಗಿಸಲು 129 ತಾಲೂಕು ಪ್ರಯೋಗಾಲಯ, ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಪ್ರಯೋಗಾಲಯ ಹಾಗೂ ಬೆಂಗಳೂರಿನಲ್ಲಿ ರಾಜ್ಯ ರೆಫ‌ರಲ್‌ ಪ್ರಯೋಗಾಲಯ ಸ್ಥಾಪಿಸಲು ನಿರ್ಧರಿಸಲಾಗಿದೆ.

ಜತೆಗೆ ಕ್ಷಯರೋಗಿಗಳ ಆರಂಭಿಕ ತಪಾಸಣೆ ಮತ್ತು ಚಿಕಿತ್ಸೆಗೆ ಸಮುದಾಯ ಆಧಾರಿತ ತಪಾಸಣೆ ಚಟುವಟಿಕೆ ನಡೆಸಲು 12.50 ಕೋಟಿ ರೂ. ಪ್ರಾಸ್ತಾಪಿಸಲಾಗಿದೆ. ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ಹೆಚ್ಚಿನ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ನಿರ್ಧರಿಸಲಾಗಿದೆ. ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಹೊಸದಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆ ಮಾಡಲು ಸಿಎಂ ಮುಂದಾಗಿದ್ದಾರೆ.

ಆಸ್ಪತ್ರೆಗಳು ಮೇಲ್ದರ್ಜೆಗೆ
ಖಾನಾಪುರ, ಆನೇಕಲ್‌, ಶಿರಹಟ್ಟಿ, ಶೃಂಗೇರಿ, ಯಳಂದೂರು, ನೆಲಮಂಗಲ ಮತ್ತು ಹೊಸಕೋಟೆ ತಾಲೂಕುಗಳ ಸಮುದಾಯ ಆರೋಗ್ಯ ಕೇಂದ್ರಗಳನ್ನು 100 ಹಾಸಿಗೆಗಳ ಸಾಮರ್ಥಯದ ತಾಲೂಕು ಆಸ್ಪತ್ರೆ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಸಿಎಂ ಘೋಷಿಸಿದ್ದಾರೆ. ಪಿಎಂ-ಎಬಿಎಚ್‌ಐಎಂ ಅಡಿಯಲ್ಲಿ ತೃತೀಯ ಹಂತದ ಆರೈಕೆ ಒದಗಿಸಲು ಕೋಲಾರ, ಬಾಗಲಕೋಟೆ, ಯಾದಗಿರಿ, ಗದಗ, ಚಿಕ್ಕಮಗಳೂರು, ರಾಮನಗರ, ವಿಜಯನಗರ ಮತ್ತು ದೊಡ್ಡಬಳ್ಳಾಪುರ ಆಸ್ಪತ್ರೆಗಳಲ್ಲಿ 50 ಹಾಸಿಗೆಯ “ಕ್ರಿಟಿಕಲ್‌ ಕೇರ್‌ ಬ್ಲಾಕ್‌’ ಹಾಗೂ ತುಮಕೂರು ಮತ್ತು ಬೆಂಗಳೂರಿನಲ್ಲಿ 100 ಹಾಸಿಗೆಗಳ ಕ್ರಿಟಿಕಲ್‌ ಕೇರ್‌ ಬ್ಲಾಕ್‌ಗಳ ಸ್ಥಾಪನೆ ಮಾಡಲು ಸಿಎಂ ಮುಂದಾ ಗಿ ದ್ದಾರೆ.

1 ಲಕ್ಷ ಡಯಾಲಿಸಿಸ್‌ ಸೈಕಲ್‌
– ಉಚಿತ ಡಯಾಲಿಸಿಸ್‌ ಸೇವೆಯನ್ನು ಪ್ರಸಕ್ತ ಸಾಲಿನಲ್ಲಿ 1 ಲಕ್ಷ ಡಯಾಲಿಸಿಸ್‌ ಸೈಕಲ್‌ಗ‌ಳಿಗೆ ಹೆಚ್ಚಳ.

ಆಕಾಂಕ್ಷಿ ತಾಲೂಕುಗಳಲ್ಲಿ ಆರೋಗ್ಯ ಸುಧಾರಣೆ
ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳ ಆರೋಗ್ಯ ಸುಧಾರಣೆಗೆ 720 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಅದರಂತೆ, 345 ಕೋಟಿ ರೂ. ವೆಚ್ಚದಲ್ಲಿ 25 ತಾಲೂಕುಗಳಲ್ಲಿ 28 ಹೊಸ ಸಮುದಾಯ ಆರೋಗ್ಯ ಕೇಂದ್ರಗಳ ಸ್ಥಾಪನೆ ಆಗಲಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನಿರ್ಮಿಸಲಾದ 14 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದ್ವಿತೀಯ ಆರೈಕೆ ಸೇವೆಗಳನ್ನು ಬಲಪಡಿಸಲು ತಜ್ಞರು ಮತ್ತು ಇತರೆ ನುರಿತ ಪ್ಯಾರಾ ಮೆಡಿಕಲ್‌ ಸಿಬ್ಬಂದಿಗಳ ಸೇವೆಗಳು 35 ಕೊಟಿ ರೂ. ವೆಚ್ಚದಲ್ಲಿ ಲಭ್ಯವಾಗಲಿದೆ. ಆರೋಗ್ಯ ಸಂಸ್ಥೆಗಳು ದಿನದ 24 ಗಂಟೆ ಕಾರ್ಯನಿರ್ವಹಿಸಲು ಬೇಕಾಗುವ ಮೂಲಭೂತಸೌಕರ್ಯ ಮತ್ತು ಮಾನವ ಸಂಪನ್ಮೂಲಗಳನ್ನು ಒದಗಿಸಲು 150 ಕೋಟಿ ರೂ. ಅನುದಾನ. 137 ಕೋಟಿ ರೂ. ವೆಚ್ಚದಲ್ಲಿ 65 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ. ಆರೋಗ್ಯ ಸಂಸ್ಥೆಗಳಲ್ಲಿ ಪರಿಣಾಮಕಾರಿ ತಪಾಸಣೆ, ರೋಗ ನಿರ್ಣಯ ಮತ್ತು ಚಿಕಿತ್ಸೆಗಾಗಿ ಅಗತ್ಯ ವೈದ್ಯಕೀಯ ಉಪಕರಣಗಳ ಖರೀದಿಗೆ 50 ಕೋಟಿ ರೂ. ಮೀಸಲಿಡಲಾಗಿದೆ.

ಅಂಗಾಂಗ ಜೋಡಣೆಗೆ ಆಸ್ಪತ್ರೆ
ನಿಮ್ಹಾನ್ಸ್‌ ಸಂಸ್ಥೆಯ ಆವರಣದಲ್ಲಿ 146 ಕೋಟಿ ರೂ. ವೆಚ್ಚದಲ್ಲಿ ಅಂಗಾಂಗ ಜೋಡಣೆಗೆ ಮೀಸಲಾದ ದೇಶದ ಪ್ರಥಮ ಸಾರ್ವಜನಿಕ ಆಸ್ಪತ್ರೆ ಸ್ಥಾಪಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಜೊತೆಗೆ ರಾಯಚೂರಿನಲ್ಲಿ ದೆಹಲಿಯ ಏಮ್ಸ್‌ ಮಾದರಿ ಆಸ್ಪತ್ರೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಸ್ವಯಂಚಾಲಿತ ಮತ್ತು ಕೇಂದ್ರೀಕೃತ ರಕ್ತನಿಧಿ ನಿರ್ವಹಣಾ ವ್ಯವಸ್ಥೆ ಸಾ#ಪನೆಯನ್ನು ಪ್ರಸ್ತಾಪಿಸಲಾಗಿದೆ.

ಕ್ಯಾನ್ಸರ್‌ ಪತ್ತೆಗೆ “ಜೀವಸುಧೆ’ ಎಂಬ ಸಂಜೀವಿನಿ
“ಚಿಕಿತ್ಸೆಗಿಂತ ರೋಗ ಬರುವುದನ್ನು ತಡೆಗಟ್ಟುವುದು ಉತ್ತಮ’ ಎನ್ನುವಂತೆ ಮಾರಣಾಂತಿಕ ಕ್ಯಾನ್ಸರ್‌ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಮುನ್ನೆಚ್ಚರಿಕಾ ಚಿಕಿತ್ಸಾ ಕ್ರಮಗಳಿಗೆ ಒತ್ತು ನೀಡಿರುವ ಸರ್ಕಾರ ಅದರಲ್ಲೂ ರಾಜ್ಯವನ್ನು ಹೆಚ್ಚಾಗಿ ಕಾಡುತ್ತಿರುವ ಸ್ತನ, ಬಾಯಿ ಮತ್ತು ಗರ್ಭಕಂಠದ ಕ್ಯಾನ್ಸರ್‌ ಪತ್ತೆಗೆ “ಜೀವಸುಧೆ’ ಹೆಸರಲ್ಲಿ ಸಂಜೀವಿನಿ ಕಂಡುಹಿಡಿದಿದೆ.

ಸ್ತನ ಕ್ಯಾನ್ಸರ್‌ನಲ್ಲಿ ಚೆನ್ನೈ ನಂತರ ಇಡೀ ದೇಶದಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. 30 ಸಾವಿರ ಪ್ರಕರಣಗಳಿದ್ದು, ವರ್ಷಕ್ಕೆ 9 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳ ರೋಗ ನಿರ್ಣಯ ಆಗುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿ ತಂಬಾಕು ಸೇವಿಸದೆ ಬಾಯಿ ಕ್ಯಾನ್ಸರ್‌ ಪ್ರಕರಣಗಳು ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿವೆ. ಗರ್ಭಕಂಠ ಕ್ಯಾನ್ಸರ್‌ ಸಹ ರಾಜ್ಯವನ್ನು ಹೆಚ್ಚಾಗಿ ಬಾಧಿಸುತ್ತಿದೆ. 14 ವರ್ಷ ವಯೋಮಾನದ ಬಾಲಕಿಯರಿಗೆ ಗರ್ಭಕಂಠ ಕ್ಯಾನ್ಸರ್‌ ಲಸಿಕೆ ನೀಡಲು ಕೇಂದ್ರ ಸರ್ಕಾರ ಯೋಜಿಸಿರುವ 6 ರಾಜ್ಯಗಳ ಪೈಕಿ ಕರ್ನಾಟಕ ಒಂದಾಗಿದೆ. ಈ ಎಲ್ಲಾ ಹಿನ್ನೆಲೆಗಳಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿಯವರು “ಜೀವಸುಧೆ’ ಘೋಷಿಸಿದ್ದಾರೆ.

ಕ್ಯಾನ್ಸರ್‌ ರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆಯಾದರೆ ಸಕಾಲಿಕ ಚಿಕಿತ್ಸೆಯಿಂದ ರೋಗಿಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಸ್ತನ, ಬಾಯಿ ಮತ್ತು ಗರ್ಭಕಂಠದ ಕ್ಯಾನ್ಸರ್‌ ಪತ್ತೆ ಹಚ್ಚಲು “ಜೀವಸುಧೆ’ ಎಂಬ ವ್ಯಾಪಕ ತಪಾಸಣಾ ಶಿಬಿರಗಳನ್ನು ರಾಜ್ಯಾದ್ಯಂತ ಆಯೋಜಿಸಲಾಗುವುದು. ಅಗತ್ಯವಿರುವವರಿಗೆ ಹೆಚ್ಚಿನ ಚಿಕಿತ್ಸೆ ಪಡೆಯಲು ತೃತೀಯ ಆರೈಕೆ ಆಸ್ಪತ್ರೆಗಳಿಗೆ ಕಳಿಸಲಾಗುವುದು. ಇದರ ಜೊತೆಗೆ ಕ್ಯಾನ್ಸರ್‌ ಪತ್ತೆಗೆ ಅಗತ್ಯವಿರುವ ಸಾಧನಗಳ ಖರೀದಿಗೆ 12 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಯವರು ಘೋಷಿಸಿದ್ದಾರೆ.

ಉತ್ತರ ಕನ್ನಡಕ್ಕೆ “ಸೂಪರ್‌’ ಭಾಗ್ಯ
ಜಿಲ್ಲೆಗೆ ಒಂದು ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಬೇಕು ಎಂಬು ಬಹುದಿನ ಬೇಡಿಕೆಗೆ ಕೊನೆಗೂ ಬಜೆಟ್‌ನಲ್ಲಿ ಮುಕ್ತಿಕಾಣಿಸಿರುವ ಸಿಎಂ ಅವರು, ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಸ್ಥಾಪನೆಯ ಬಗ್ಗೆ 2023-24ನೇ ಸಾಲಿನ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಗೆ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಬೇಕು ಎಂದು 2019ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಆಗಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಈ ಕುರಿತು ಪರಿಶೀಲಿಸುವುದಾಗಿ ಹೇಳಿದ್ದರು. ಮುಂದೆ ಅವರ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಬಂತು. ಆಗ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಹೋರಾಟ ಇನ್ನಷ್ಟು ಜೋರಾಯಿತು. ಜಿಲ್ಲೆಯಲ್ಲಿ ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಪಾದಯಾತ್ರೆ ನಡೆಯಿತು. ಹಿಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಜಿಲ್ಲೆಯ ಹೋರಾಟಗಾರರು, ಜನಪ್ರತಿನಿಧಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಸದನದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಹೋರಾಟ ಮಾಡಿದ್ದರು. ಈಗ ಕೊನೆಗೂ ಮುಖ್ಯಮಂತ್ರಿಯವರು ಬಜೆಟ್‌ನಲ್ಲಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಘೋಷಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next