ದೇವನಹಳ್ಳಿ: ಹಣ, ಆಸ್ತಿಗಿಂತಲೂ ಆರೋಗ್ಯ ಅಮೂಲ್ಯ. ಆರೋಗ್ಯವನ್ನು ಕಾಪಾಡಿಕೊಳ್ಳಲು ಸ್ವತ್ಛತೆಗೆ ಆದ್ಯತೆ ನೀಡಬೇಕು ಎಂದು ಮಾಜಿ ಶಾಸಕ ಜಿ ಚಂದ್ರಣ್ಣ ತಿಳಿಸಿದರು.
ನಗರದ ಲಯನ್ಸ್ ಸೇವಾ ಭವನದಲ್ಲಿ ಲಯನ್ಸ್ ಸಂಸ್ಥೆ, ಲಯನ್ಸ್ ಸೇವಾ ಪ್ರತಿಷ್ಠಾನ, ಯಲಹಂಕ ಹೋಮಿಯೋಪತಿ ಕೇರ್ ಕ್ಲೀನಿಕ್, ದೇವನಹಳ್ಳಿ ನ್ಯೂ ಮಾನಸ ಆಸ್ಪತ್ರೆಯಿಂದ ನಡೆದ ಮಧುಮೇಹ ತಪಾಸಣೆ, ವೈದ್ಯಕೀಯ ಶಿಬಿರ ಹಾಗೂ ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮಲ್ಲಿ ಮಾತನಾಡಿ, ಆರೋಗ್ಯಕ್ಕೆ ಆದ್ಯತೆ ನೀಡದೇ ಗಂಭೀರ ಖಾಯಿಲೆಗಳಿಗೆ ತುತ್ತಾಗುವ ಸ್ಥಿತಿ ನಿರ್ಮಾಣವಾಗಿದೆ.
ನಿಯಮಿತ ಆಹಾರ ಸೇವನೆ ಮಾಡಬೇಕು. ಆರೋಗ್ಯ ಕಾಪಾಡಿಕೊಂಡು ಇತರರಿಗೂ ಸಹ ಅರಿವು ಮೂಡಿಸಬೇಕು. ರೋಗ ಬಂದಾಗ ನಿರ್ಲಕ್ಷ್ಯ ವಹಿಸಬಾರದು. ತಪಾಸಣೆ ಮಾಡಿಸಿ, ವೈದ್ಯರ ಸಲಹೆ ಪಡೆಯಬೇಕು ಎಂದು ತಿಳಿಸಿದರು.
ಕಂಪ್ಯೂಟರ್ ಕಲಿಕೆಯಿಂದ ಅನುಕೂಲ: ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತಿದೆ. ಈಗಿನ ಮಕ್ಕಳಿಗೆ ಮತ್ತು ಎಲ್ಲರೂ ಕಂಪ್ಯೂಟರ್ ಕಲಿತರೆ ಹೆಚ್ಚಿನ ಅನುಕೂಲವಾಗುತ್ತದೆ. ಮಧುಮೇಹದ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು ಮುಡಬೇಕು. ಖಾಯಿಲೆ ಬಂದಂತಹ ಸಂದರ್ಭದಲ್ಲಿ ಯಾವ ಚಿಕಿತ್ಸೆ ಪಡೆಯಬೇಕು. ಅನುಸರಿಸಬೇಕಾದ ಕ್ರಮಗಳನ್ನು ವೈಧ್ಯರಿಂದ ತಿಳಿಯಬೇಕು ಎಂದು ಸಲಹೆ ನೀಡಿದರು.
ಹೋಮಿಯೋಪತಿಯಿಂದ ಅಡ್ಡ ಪರಿಣಾಮವಿಲ್ಲ: ಲಯನ್ಸ್ ಸಂಸ್ಥೆ ಅಧ್ಯಕ್ಷ ಶ್ರೀರಾಮಯ್ಯ ಮಾತನಾಡಿ, ಹೋಮಿಯೋಪತಿಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಇತ್ತೀಚಿನ ದಿನಗಳಲ್ಲಿ ಮಧುಮೇಹ ರೋಗ ಸಮಾನ್ಯವಾಗಿದೆ. ಸಮಯಕ್ಕೆ ತಕ್ಕಂತೆ ಔಷಧಿಗಳನ್ನು ತೆಗೆದುಕೊಳ್ಳಬೇಕು. ಬಡ ಜನರ ಅನುಕೂಲಕ್ಕಾಗಿ ಲಯನ್ಸ್ ಸಂಸ್ಥೆ ಕೆಲಸವನ್ನು ಮಾಡುತ್ತಿದೆ. ಆರೋಗ್ಯದ ಕಡೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಈ ವೇಳೆಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಆರ್. ರವಿಕುಮಾರ್, ಹೋಮಿಯೋಪತಿ ವೈದ್ಯ ಡಾ.ಜೆ. ವಿಶ್ವನಾಥ್, ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಜಯ ಪ್ರಕಾಶ್, ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷರಾದ ಎಸ್. ಆರ್. ಸತೀಶ್ ಕುಮಾರ್, ವಿಜಯ್ ಕುಮಾರ್, ಸದಸ್ಯರಾದ ಗೋಪಾಲಗೌಡ ಹಾಜರಿದ್ದರು.