ಹೊನ್ನಾಳಿ: ಆರೋಗ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಪ್ರಮುಖ ಕರ್ತವ್ಯವಾಗಿದ್ದು, ನಮ್ಮ ಸುತ್ತಮುತ್ತಲಿನ ಪರಿಸರ ಸ್ವತ್ಛತೆ ಆದ್ಯತೆ ನೀಡಿದಾಗ ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ, ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಬೆಳಗುತ್ತಿ ಮಲ್ಲಿಗೇನಹಳ್ಳಿ ಅವಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ತಾಲೂಕು ಬಿಜೆಪಿ ಘಟಕ ಮತ್ತು ಕೊಟ್ಟೂರೇಶ್ವರ ಮಕ್ಕಳ ಆಸ್ಪತ್ರೆ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಮನುಷ್ಯ ಜೀವಿತಾವಧಿಧಿಯವರೆಗೆ ಯಾವುದೇ ಮಾರಕ ಕಾಯಿಲೆ ಬರದಂತೆ ನಮ್ಮ ದಿನ ನಿತ್ಯದ ಆಹಾರ ಸೇವನೆಯಲ್ಲಿ ಹಿತಮಿತ ಬಳಕೆಯು ತುಂಬಾ ಅವಶ್ಯವೆನಿಸಿದೆ. ಇಂದಿನ ಆಹಾರ ಪದ್ಧತಿ ತುಂಬಾ ಕ್ಲಿಷ್ಟಕರವಾಗಿದ್ದು, ನಮ್ಮ ನಿತ್ಯದ ಜಂಜಾಟದಲ್ಲಿ ಕಲುಷಿತ ವಾತಾವರಣದಿಂದ ಹಲವಾರು ಮಾರಕ ರೋಗಗಳು ಉಲ್ಬಣಿಸಿ ನಾವುಗಳು ಹಲವಾರು ರೋಗ ರುಜಿನಗಳಿಗೆ ತುತ್ತಾಗುತ್ತಿದ್ದೇವೆ ಎಂದರು.
ಕೊಟ್ಟೂರೇಶ್ವರ ಆಸ್ಪತ್ರೆ ಮುಖ್ಯಸ್ಥ ಡಾ| ಕೋಟ್ರೇಶ್ ಮಾತನಾಡಿ, ಕೇವಲ ದುಡಿಮೆಯೊಂದನ್ನೇ ಧ್ಯೇಯವಾಗಿಟ್ಟುಕೊಳ್ಳದೇ ಬಡಜನತೆಗೆ ಏನಾದರೂ ಸೇವೆ ಮಾಡಬೇಕೆಂಬ ಉದ್ದೇಶದಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಶಿಬಿರಗಳನ್ನು ನಡೆಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. ಜಿಪಂ ಸದಸ್ಯ ಎಂ.ಆರ್.ಮಹೇಶ್ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ರೇಖಾ, ತಾಪಂ ಅಧ್ಯಕ್ಷೆ ಸುಲೋಚನಮ್ಮ, ತಾಪಂ ಉಪಾಧ್ಯಕ್ಷ ಸಿದ್ದಲಿಂಗಪ್ಪ, ತಾಪಂ ಸದಸ್ಯ ಮರಿಕನ್ನಪ್ಪ, ಎಪಿಎಂಸಿ ನಿರ್ದೇಶಕ ಸುರೇಶ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶಾಂತರಾಜ್ ಪಾಟೀಲ್, ಗ್ರಾಪಂ ಸದಸ್ಯೆ ಶೋಭಾ, ಜೀನಹಳ್ಳಿ ಶೇಖರಪ್ಪ, ರೈತಾ ಮೋರ್ಚಾ ಉಪಾಧ್ಯಕ್ಷ ರಾಜು ಇತರರಿದ್ದರು.