ಬೆಂಗಳೂರು: ನಗರದಲ್ಲಿ ಕಸ ಸಂಗ್ರಹಿಸುವ ಪೌರಕಾರ್ಮಿಕರಿಗೆ ಸಮರ್ಪಕ ಸಲಕರಣೆಗಳನ್ನು ನೀಡಲಾಗುವುದು ಎಂದು ಮೇಯರ್ ಎಂ.ಗೌತಮ್‌ಕುಮಾರ್ ಹೇಳಿದರು. ತ್ಯಾಜ್ಯ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಇಂದೋರ್ ಹಾಗೂ ನೆದರ್‌ಲ್ಯಾಂಡ್ ಪ್ರತಿನಿಧಿಗಳೊಂದಿಗೆ ಬುಧವಾರ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿ, ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಆರು ತಿಂಗಳಿಗೊಮ್ಮೆ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಲು ಕ್ರಮವಹಿಸಲಾಗುತ್ತಿದೆ ಎಂದರು.
ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಂದೋರ್ ಮಾದರಿ ತಿಳಿಯಲು ನಗರದ ಪೌರಕಾರ್ಮಿಕರ ಸಂಘದ ಪ್ರತಿನಿಧಿಗಳ ತಂಡವನ್ನು ಶೀಘ್ರವೇ ಕಳುಹಿಸಲಾಗುವುದು ಎಂದು ಹೇಳಿದರು. ಪಾಲಿಕೆ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ನಿವಾರಣೆ ಮಾಡುವ ದೃಷ್ಟಿಯಿಂದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಂಸ್ಕರಣಾ ಘಟಕ, ವೇಸ್ಟು ಟು ಎನರ್ಜಿ, ಬಯೋಮಿಥನೈಸೇಷ್, ಆಟೋ ಟಿಪ್ಪರ್, ಕಾಂಪ್ಯಾಕ್ಟರ್‌ಗಳು ಸೇರಿದಂತೆ ಇನ್ನಿತರ ಅಂಶಗಳನ್ನು ಯಾವ ಮಾದರಿಯಲ್ಲಿ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಸರ್ಕಾರದ ಅನುಮತಿ ಪಡೆದು ಜಾರಿಗೊಳಿಸಬೇಕಾಗುತ್ತದೆ ಎಂದರು.
ದೀರ್ಘಾವಧಿ ಯೋಜನೆಗಳ ಸಮಗ್ರ ಯೋಜನಾ ವರದಿ ಸಿದ್ಧಪಡಿಸುವಂತೆ ಘನತ್ಯಾಜ್ಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅವರು ವರದಿ ನೀಡಿದ ಬಳಿಕ ಪಾಲಿಕೆ ಎಲ್ಲಾ ಸದಸ್ಯರಿಗೂ ಆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುವುದು. ನಗರವನ್ನು ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಮೊದಲ ಸ್ಥಾನಕ್ಕೆ ಬರುವಂತೆ ಮಾಡಲು ಎರಡು ವರ್ಷದ ಗುರಿಯನ್ನಿಟ್ಟುಕೊಂಡು ಪಾಲಿಕೆಯ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡುತ್ತಿದ್ದು, ಸಾರ್ವಜನಿಕರೂ ಸಹಕಾರ ನೀಡಬೇಕು ಎಂದು ಹೇಳಿದರು. ಈ ವೇಳೆ ಘನತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತ ರಂದೀಪ್, ಜಂಟಿ ಆಯುಕ್ತ ಸಫìರಾಜ್ ಖಾನ್ ಮತ್ತಿತರರು ಹಾಜರಿದ್ದರು.
ಸ್ವಚ್ಛತಾ ಸಿಪಾಯಿಗಳ ಕುರಿತು ವರದಿ ಪ್ರಕಟ: ಪೌರಕಾರ್ಮಿಕರಿಗೆ ಸೂಕ್ತ ಸಲಕರಣೆ ನೀಡದೆ ಇರುವುದರಿಂದ ಅವರು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎನ್ನುವ ಬಗ್ಗೆ ಡಿ.2ರಂದು
ಉದಯವಾಣಿ “ಅನಾರೋಗ್ಯ ಸುಳಿಯಲ್ಲಿ ಸ್ವಚ್ಛತಾ ಸಿಪಾಯಿಗಳು’ ಎನ್ನುವ ಶೀರ್ಷಿಕೆಯಡಿ ಸಮಗ್ರ ವರದಿ ಪ್ರಕಟಿಸಿತ್ತು. ಈ ವರದಿಯಲ್ಲಿ ಪೌರಕಾರ್ಮಿಕರು ಕ್ಯಾನ್ಸರ್‌ನಂತಹ ಸಮಸ್ಯೆಗಳಿಗೆ ತುತ್ತಾಗುತ್ತಿರುವ ಬಗ್ಗೆ ಬೆಳಕು ಚೆಲ್ಲಲಾಗಿತ್ತು.
ಪೌರಕಾರ್ಮಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆರು ತಿಂಗಳಿಗೊಮ್ಮೆ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸುವುದಕ್ಕೆ ಕ್ರಮ ತೆಗೆದು ಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಧುಮೇಹ, ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳು ಕಾಣಿಸಿಕೊಂಡರೂ, ತುರ್ತು ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ.
-ಎಂ. ಗೌತಮ್‌ಕುಮಾರ್, ಮೇಯರ್