ಧಾರವಾಡ: ದ್ವಿಚಕ್ರ ವಾಹನ ದುರಸ್ತಿ ಮಾಡುವ ಮೇಸ್ತ್ರಿಗಳ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರದಿಂದ ಬರುವ ದಿನಗಳಲ್ಲಿ ಹೊಸ ಯೋಜನೆ ಜಾರಿಗೆ ತರಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.
ನಗರದ ಶಿವಾಜಿ ವೃತ್ತದಲ್ಲಿರುವ ಭಾರತ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಿಎಂ ಅವರ ಮನವೊಲಿಸಿ ಶೀಘ್ರದಲ್ಲಿಯೇ ಹೊಸ ಯೋಜನೆ ಜಾರಿಗೆ ತರಲು ಶ್ರಮಿಸಲಾಗುವುದು ಎಂದರು.
ಇಎಸ್‌ಐ ಆಸ್ಪತ್ರೆಯಲ್ಲಿ ಮೇಸ್ತ್ರಿಗಳ ಆರೋಗ್ಯ ತಪಾಸಣೆ, ಜೀವವಿಮೆ ಹಾಗೂ ಅಪಘಾತ ವಿಮೆ ಮತ್ತು ಮೇಸ್ತ್ರಿಗಳ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಸೌಲಭ್ಯ ಕಲ್ಪಿಸಲು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮೇಸ್ತ್ರಿಗಳು ಗುಟ್ಕಾ, ಮದ್ಯಪಾನ ಸೇವನೆಯಂತಹ ದುಶ್ಚಟಗಳಿಂದ ದೂರ ಉಳಿದು, ಆರೋಗ್ಯ ಕಾಳಜಿ ಹೊಂದಬೇಕು. ಆ ಮೂಲಕ ಇತರರಿಗೆ ಮಾದರಿಯಾಗುವಂತಹ ಜೀವನ ಸಾಗಿಸಬೇಕು. ಕಡಿಮೆ ದರದಲ್ಲಿ ಸಮಾಜಮುಖೀ ಸೇವೆ ನೀಡಬೇಕು ಎಂದು ಸಲಹೆ ನೀಡಿದರು. ಮಂಜುನಾಥ ಕದಂ ಮಾತನಾಡಿದರು.
ಈ ಶಿಬಿರದಲ್ಲಿ ಒಟ್ಟು 667 ಜನರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು. ಇದೇ ವೇಳೆ 35 ಜನರು ರಕ್ತದಾನ ಮಾಡಿದರು. ಒಟ್ಟು 116 ಜನರ ರಕ್ತ ತಪಾಸಣೆ ಮಾಡಲಾಯಿತು. ಅಲ್ಲದೆ, 24 ಜನರಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆಗೆ ಒಳಪಡಿಸಲು ನಿರ್ಧರಿಸಲಾಯಿತು.
ರಾಷ್ಟ್ರಮಟ್ಟದ ಟಚ್‌ರಬ್ಬಿ ಕ್ರೀಡೆಯಲ್ಲಿ ಪಾಲ್ಗೊಂಡ ಮರಾಠ ವಿದ್ಯಾ ಪ್ರಸಾರಕ ಮಂಡಳಿಯ ವಿದ್ಯಾರ್ಥಿಗಳಿಗೆ ಹಾಗೂ ಜಿಲ್ಲಾಮಟ್ಟದ ಥ್ರೋ ಬಾಲ್ ಸ್ಪರ್ಧೆಯಲ್ಲಿ ವಿಜೇತರಾದ ವಿವಿಧ ಕಾಲೇಜ್ ವಿದ್ಯಾರ್ಥಿಗಳಿಗೆ ಟ್ರೋಫಿ, ಪ್ರಮಾಣ ಪತ್ರ ಹಾಗೂ ಬಹುಮಾನವನ್ನು ಸಚಿವ ವಿನಯ ಕುಲಕರ್ಣಿ ವಿತರಿಸಿದರು. ಶಿವಲೀಲಾ ಕುಲಕರ್ಣಿ, ಇಸ್ಲಾಯಿಲ್ ತಮಟಗಾರ, ಮನೋಜ ಕರ್ಜಗಿ, ಯಾಶೀನ್ ಹಾವೇರಿಪೇಟ, ನವೀನ್ ಕದಂ, ಡಾ| ವಿ.ಡಿ. ಕರ್ಪೂರಿಮಠ ಇದ್ದರು.