Advertisement

ಚಾರ್ಮಾಡಿ, ಕೊಕ್ಕಡ ಆರೋಗ್ಯ ಕೇಂದ್ರ ಉದ್ಘಾಟನೆ ವಿಳಂಬ : ಲೋಕಾರ್ಪಣೆಗೆ ಜನರ ಆಗ್ರಹ

02:26 AM May 01, 2021 | Team Udayavani |

ಬೆಳ್ತಂಗಡಿ: ಗ್ರಾಮೀಣ ಭಾಗದ ಮಂದಿಗೆ ಅಗತ್ಯ ಆರೋಗ್ಯ ಸೇವೆ ಒದಗಿಸಲು ಸರಕಾರವು ಸ್ಥಳೀಯವಾಗಿ ಆರೋಗ್ಯ ಕೇಂದ್ರ ಸ್ಥಾಪಿಸಲು ಮುಂದಾಗಿದೆ. ಆದರೆ ಚಾರ್ಮಾಡಿ ಮತ್ತು ಕೊಕ್ಕಡದಲ್ಲಿ ನಿರ್ಮಿಸಿರುವ ಆರೋಗ್ಯ ಕೇಂದ್ರ ಉದ್ಘಾಟನೆಗೆ ಮಾತ್ರ ದಿನ ಕೂಡಿ ಬಂದಿಲ್ಲ.

Advertisement

ಇದೀಗ ಎಲ್ಲೆಡೆ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಅಗತ್ಯ ಆರೋಗ್ಯ ಸೇವೆಗೆ ಸುಮಾರು 30 ಕಿ.ಮೀ. ದೂರುದ ಬೆಳ್ತಂಗಡಿಗೆ ತೆರಳಬೇಕಿದೆ. ಈ ಕುರಿತು ಉದಯವಾಣಿ ಕಳೆದ ನವೆಂಬರ್‌ ತಿಂಗಳಲ್ಲಿ ವರದಿ ಪ್ರಕಟಿಸಿ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನ ಸೆಳೆದಿತ್ತು. ಆದರೂ ಅನುದಾನ ಕೊರತೆಯಿಂದ ಆಸ್ಪತ್ರೆಗೆ ಕಾಯಕಲ್ಪ ಇನ್ನೂ ದೊರೆತಿಲ್ಲ.

ಜನಸಾಮಾನ್ಯರಿಂದ ಶಾಸಕರಿಗೆ ಬಹಿರಂಗ ಪ್ರಶ್ನೆ
ಆಸ್ಪತ್ರೆ ಉದ್ಘಾಟನೆಗೆ ಕ್ರಮ ಕೈಗೊಳ್ಳುವಂತೆ ಶಾಸಕ ಹರೀಶ್‌ ಪೂಂಜ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಜನ ಪ್ರಶ್ನೆ ಮಾಡಿದ್ದಾರೆ. ಕಟ್ಟಡ ಉದ್ಘಾಟನೆ ಯಾವಾಗ ಮಾಡುತ್ತೀರಿ? ಈಗಿನ ಪರಿಸ್ಥಿತಿ ಹೇಳ ತೀರದು. ಒಂದು ಕಡೆ ಕೋವಿಡ್‌ ಮಹಾಮಾರಿ ಹೆಚ್ಚುತ್ತಿದೆ. ರಾಜಕೀಯ ಪ್ರತಿಷ್ಠೆಗೆ ಜನರನ್ನು ಯಾಕೆ ಸಂಕಷ್ಟದಲ್ಲಿ ಸಿಲುಕಿಸುತ್ತಿದ್ದೀರಿ? ನಿಮ್ಮ ಸರಕಾರವು ಅಧಿಕಾರದಲ್ಲಿದೆ ಆದಷ್ಟು ಬೇಗ ಆಸ್ಪತ್ರೆಯನ್ನು ಜನರ ಸೇವೆಗೆ ಮುಕ್ತಗೊಳಿಸಿ. ಇಲ್ಲದಿದ್ದರೆ ಕೋವಿಡ್‌ ರೋಗಿಗಳಿಗೆ ಬೆಡ್‌ ಅವಕಾಶ ಮಾಡಿಕೊಡಿ ಎಂದು ಬಹಿರಂಗ ಪ್ರಶ್ನೆ ಇಟ್ಟಿದ್ದಾರೆ.

ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ
ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೀಟಿಗೆ ಸುಣ್ಣದಗೂಡಿನ ಬಳಿ 1.30 ಕೋ.ರೂ. ವೆಚ್ಚದಲ್ಲಿ ಕರ್ನಾಟಕ ಆರೋಗ್ಯ ವ್ಯವಸ್ಥೆಗಳ ಅಭಿವೃದ್ಧಿ ಯೋಜನೆ (ಕೆ.ಎಚ್‌.ಎಸ್‌.ಡಿ.ಸಿ)ಯಡಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಗೊಂಡು ಸಮಯವೇ ಕಳೆದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಚಾರ್ಮಾಡಿ ಕಟ್ಟಡದ ಕಾಮಗಾರಿ ಮುಗಿದು ಸುಮಾರು 2 ಎರಡು ವರ್ಷ ಕಳೆದಿದೆ. ಆದರೂ ಇಂದಿಗೂ ಉದ್ಘಾಟನೆ ಆಗದೆ ಉಳಿದಿದೆ. ಇಲ್ಲಿಯ ಜನರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೋಮಂತಡ್ಕ ಅಥವಾ ಅಣಿಯೂರು ಇಲ್ಲವೇ ಉಜಿರೆ ಕಡೆ ಹೋಗಬೇಕಾದ ಪರಿಸ್ಥಿತಿ ಬಂದಿದೆ.

ಆರು ಹಾಸಿಗೆಯುಳ್ಳ ಸುಸಜ್ಜಿತ ಕಟ್ಟಡ
ಸರ್ವೇ ನಂಬರ್‌ 174 /1ಸಿ 1ಎ ಯ 0.88ಎಕ್ರೆ ಜಾಗದಲ್ಲಿ ಸುಮಾರು 2,500 ಚದರ ಅಡಿಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಸರಕಾರ ಟೆಂಡರ್‌ ಕರೆದು ಕೆಲಸ ಆರಂಭಿಸಲಾಗಿತ್ತು. 6 ಹಾಸಿಗೆಯುಳ್ಳ ಹೊಸ ಪ್ರಾ.ಆ.ಕೇ. ಕಟ್ಟಡದಲ್ಲಿ ಸುಮಾರು 12ರಷ್ಟು ಕೊಠಡಿಗಳು, ವಿದ್ಯುತ್‌ ಸಂಪರ್ಕ ಇತ್ಯಾದಿ ಅಗತ್ಯ ಕಾಮಗಾರಿ ಪೂರ್ಣಗೊಂಡಿದೆ. ಕಟ್ಟಡದ ಒಳಭಾಗದಲ್ಲಿ ಕಚೇರಿ, ಸಭಾಂಗಣ, ವೈದ್ಯರ ಕೊಠಡಿ, ಸ್ಟೋರ್‌ರೂಮ್‌, ಲ್ಯಾಬ್‌, ಡ್ರೆಸ್ಸಿಂಗ್‌, ಪರೀಕ್ಷಾ ಕೊಠಡಿ, ಶಸ್ತ್ರ ಚಿಕಿತ್ಸಾ ಕೊಠಡಿ, ಔಷಧ ವಿತರಿಸಲು ಪ್ರತ್ಯೇಕ ಕೊಠಡಿ ಎಲ್ಲವನ್ನೂ ಮೀಸಲಿರಿಸಲಾಗಿದೆ.

Advertisement

ಮೂರು ಗ್ರಾಮಗಳಿಗೆ ಪ್ರಯೋಜನ
ಪ್ರಸಕ್ತ ತಾಲೂಕಿನ ನೆರಿಯ ಆರೋಗ್ಯ ಕೇಂದ್ರಕ್ಕೊಳಪಟ್ಟಂತೆ ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಕಕ್ಕಿಂಜೆಯಲ್ಲಿ ಗ್ರಾ.ಪಂ. ಹಳೇ ಕಟ್ಟಡದಲ್ಲಿ ಕೇಂದ್ರ ಒಂದು ಕಾರ್ಯನಿರ್ವಹಿಸುತ್ತಿದೆ. ಇದು ಚಿಬಿದ್ರೆ, ತೋಟತ್ತಾಡಿ ಹಾಗೂ ಚಾರ್ಮಾಡಿ ಈ ಮೂರು ಗ್ರಾಮಗಳ ವ್ಯಾಪ್ತಿಗೊಳಪಡುತ್ತಿದೆ. ಚಾರ್ಮಡಿ ಗ್ರಾಮ, ನೆರಿಯ ಸೇರಿದಂತೆ ಸುತ್ತಮುತ್ತ ಗ್ರಾಮಗಳ ಪ್ರದೇಶದಲ್ಲಿ ತುರ್ತು ಅವಘಡ ಸಂಭವಿಸಿದಲ್ಲಿ ಉಜಿರೆ, ಅಥವಾ ಬೆಳ್ತಂಗಡಿ ಆಸ್ಪತ್ರೆಗಳಿಗೆ ಬರಲು 30 ಕಿ.ಮೀ. ಅಧಿಕ ದೂರ ಓಡಾಟ ನಡೆಸಬೇಕಿದೆ. ಈ ನಿಟ್ಟಿನಲ್ಲಿ ನೂತನ ಕಟ್ಟಡ ಶೀಘ್ರ ಉದ್ಘಾಟನೆ ಆಗಬೇಕಿದೆ ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.

ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರ
ಕೊಕ್ಕಡದಲ್ಲೂ ಸುಮಾರು 4 ಕೋ.ರೂ. ವೆಚ್ಚದಲ್ಲಿ 30 ಹಾಸಿಗೆಯುಳ್ಳ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಶಿಶಿಲ, ಶಿಬಾಜೆ, ನಿಡ್ಲೆ, ನೆಲ್ಯಾಡಿ, ಅರಸಿನಮಕ್ಕಿ ಸುತ್ತಮುತ್ತದ ನಾಲ್ಕಾರು ಗ್ರಾಮಗಳ ಜನರಿಗೆ ಅತೀಹೆಚ್ಚು ಪ್ರಯೋಜನವಾಗಲಿದೆ. ಇದರ ಲೋಕಾರ್ಪಣೆಯೂ ವಿಳಂಬವಾಗಿದೆ ಎಂಬ ಕೂಗು ಕೇಳಿಬಂದಿದೆ.

ಅಗತ್ಯ ಕ್ರಮ
ಕೊಕ್ಕಡ ಆರೋಗ್ಯ ಕೇಂದ್ರ ಹಸ್ತಾಂತರವಾಗಿಲ್ಲ. ಕಕ್ಕಿಂಜೆಯಲ್ಲಿ ಈಗಾಗಲೇ ತಾತ್ಕಾಲಿಕವಾಗಿ ಗ್ರಾಮ ಪಂ. ಕಟ್ಟಡದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೂತನ ಆರೋಗ್ಯ ಕೇಂದ್ರ ಉದ್ಘಾಟನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಡಾ| ಕಲಾಮಧು, ತಾಲೂಕು ಆರೋಗ್ಯಾಧಿಕಾರಿ

ಲಾಕ್‌ಡೌನ್‌ ಕಾರಣ
ಆರೋಗ್ಯ ಕೇಂದ್ರ ಈಗಾಗಲೆ ಉದ್ಘಾಟನೆಗೊಳ್ಳಬೇಕಿತ್ತು, ಆದರೆ ಲಾಕ್‌ಡೌನ್‌ ಕಾರಣದಿಂದ ಮುಂದೂಡಲಾಗಿದೆ. ಲಾಕ್‌ಡೌನ್‌ ಬಳಿಕ ಉದ್ಘಾಟಿಸುವುದಾಗಿ ಶಾಸಕರು ತಿಳಿಸಿದ್ದಾರೆ.
-ಕೆ.ವಿ.ಪ್ರಸಾದ್‌, ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next