ಬಂಟ್ವಾಳ: ಆರೋಗ್ಯವೇ ನಿಜವಾದ ಭಾಗ್ಯ. ಮಾನವ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ದೈಹಿಕವಾದ ವಾರ್ಷಿಕ ತಪಾಸಣೆ ನಡೆಸುತ್ತಿರಬೇಕು. ಈಗ ಸಾಕಷ್ಟು ಆರೋಗ್ಯ ಶಿಬಿರಗಳು ಅಲ್ಲಲ್ಲಿ ನಡೆಯುತ್ತಿದ್ದು ಅವುಗಳ ಸದುಪಯೋಗವನ್ನು ನಾವು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಮಾ. 12ರಂದು ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಮತ್ತು ಪಲ್ಲಮಜಲು ಫ್ರೆಂಡ್ಸ್ ಇವರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮತ್ತು ವೆನಾÉಕ್ ಸರಕಾರಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಪಲ್ಲಮಜಲು ಸರಕಾರಿ ಶಾಲೆಯಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಂಟ್ವಾಳ ಪುರಸಭಾ ಸದಸ್ಯ ಪಿ.ರಾಮಕೃಷ್ಣ ಆಳ್ವ ಸ್ವಯಂ ರಕ್ತದಾನ ಮಾಡಿ ಶಿಬಿರಕ್ಕೆ ಚಾಲನೆ ನೀಡಿದರು. ಅವರು ಮಾತನಾಡಿ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು. ಇದರಿಂದ ತುರ್ತು ಸಂದರ್ಭಗಳಲ್ಲಿ ರೋಗಿಯ ಪ್ರಾಣವನ್ನು ಉಳಿಸಿ ಪ್ರಾಣದಾನ ಮಾಡಿದ ಪುಣ್ಯ ನಮಗೆ ಸಿಗುತ್ತದೆ ಎಂದರು.
ತಾ.ಪಂ.ಉಪಾಧ್ಯಕ್ಷ ಅಬ್ಟಾಸ ಅಲಿ, ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ನಾಮನಿರ್ದೇಶಿತ ಸದಸ್ಯ ಲೋಕೇಶ್ ಸುವರ್ಣ, ದ.ಕ. ಜಿಲ್ಲಾ ಧಾರ್ಮಿಕ ದತ್ತಿ ಪರಿಷತ್‌ನ ಸದಸ್ಯ ಜಗನ್ನಾಥ ಚೌಟ, ಬಂಟ್ವಾಳ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಪುಷ್ಪರಾಜ್ ಶೆಟ್ಟಿ ಗೋಳಿನೆಲ, ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಕೆ.ಎಸ್. ಅಬೂಬಕ್ಕರ್, ಸೇಸಪ್ಪ ದಾಸಯ್ಯ, ಪಲ್ಲಮಜಲು ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಂ.ರಫೀಕ್ ಪಲ್ಲಮಜಲು ಮತ್ತಿತರರು ಹಾಜರಿದ್ದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ. ಕೃಷ್ಣಕುಮಾರ್ ಪೂಂಜಾ ಸ್ವಾಗತಿಸಿ ರಾಜೀವ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಚಿವರು ನೂತನ ವಿದ್ಯುತ್ ಪರಿವರ್ತಕ ಹಾಗೂ ಕುಪ್ಪಿಲ ಸೈಟ್ ರಸ್ತೆ ಕಾಂಕ್ರೀಟ್ ಕಾಮಗಾರಿಯನ್ನು ಉದ್ಘಾಟಿಸಿದರು.