ಕಲಬುರಗಿ: ಬಯಲು ಬಹಿರ್ದೆಸೆಯಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಎಲ್ಲರೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡು ಬಳಸುವ ಮೂಲಕ ಆರೋಗ್ಯವಂತರಾಗಬೇಕು ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಅಫಜಲಪುರ ಶಾಸಕ ಮಾಲೀಕಯ್ಯ ವಿ. ಗುತ್ತೇದಾರ ತಿಳಿಸಿದರು.
ತಾಲೂಕಿನ ಫರಹತಾಬಾದ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಫರಹತಾಬಾದ ಹಾಗೂ ಹೊನ್ನಕಿರಣಗಿ ಇವುಗಳ ಸಂಯುಕ್ತಾಶ್ರಯದಲ್ಲಿ 2017-18ನೇ ಸಾಲಿನ ಕೂಸು ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಸೀಮಂತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳು ಜಿಪಿಎಸ್ ಹಾಗೂ ಪಿಡಿಒಗಳ ತೊಂದರೆಯಿಂದ ಹೆಚ್ಚಿನ ಪ್ರಗತಿ ಆಗುತ್ತಿಲ್ಲ. ಕಾರಣ ಸರ್ಕಾರ ಇಂದಿರಾ ಮನೆ ಎಂಬ ಆ್ಯಪ್ ಅಭಿವೃದ್ಧಿ ಪಡಿಸಿದ್ದು, ಈ ಆ್ಯಪನ್ನು ಮೊಬೈಲ್ ಗೆ ಡೌನ್‌ಲೋಡ್ ಮಾಡಿಕೊಂಡು, ಈ ಆ್ಯಪ್ ಮೂಲಕ ಮನೆಯೊಂದಿಗೆ ಫಲಾನುಭವಿಯ ಭಾವಚಿತ್ರ ಪಡೆದು ಕಳುಹಿಸಿದರೆ ಮನೆಯ ಅನುದಾನ ಮಂಜೂರು ಮಾಡಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಒಂದು ವಾರದಲ್ಲಿ 40 ಶೌಚಾಲಯಗಳನ್ನು ನಿರ್ಮಿಸಲು ಗುರಿ ನೀಡಲಾಗಿತ್ತು. ಅದರಂತೆ ಫರಹತಾಬಾದ ಮತ್ತು ಕಿರಣಗಿ ಗ್ರಾಮ ಪಂಚಾಯಿತಿಯ ತಲಾ 40 ಗರ್ಭಿಣಿಯರು ಶೌಚಾಲಯಗಳನ್ನು ನಿರ್ಮಿಸಿದ್ದಾರೆ ಎಂದರು.
ಜಿಪಂ ಅಧ್ಯಕ್ಷೆ ಸುವರ್ಣಾ ಎಚ್. ಮಲಾಜಿ, ಉಪಾಧ್ಯಕ್ಷೆ ಶೋಭಾ ಎಸ್. ಸಿರಸಗಿ, ಕಲಬುರಗಿ ತಾಪಂ ಅಧ್ಯಕ್ಷ ಶಿವರಾಜ ಕೆ. ಸಜ್ಜನ್ ಹಾಗೂ ವಿವಿಧ ಗ್ರಾಪಂಗಳ ಅಧ್ಯಕ್ಷರುಗಳು ಹಾಜರಿದ್ದರು.