Advertisement
ಕೋಡಿ ಶಿವಾಲಯ ಸಮೀಪದ ನಿವಾಸಿ ಕೆ. ಗಂಗಾಧರ ಪೂಜಾರಿ ಕೋಡಿ ಚಕ್ರೇಶ್ವರಿ ದೇವಸ್ಥಾನದ ಆಸುಪಾಸಿನ ಹದಿನೆಂಟು ಎಕರೆ ಪ್ರದೇಶದಲ್ಲಿರುವ 60ಕ್ಕೂ ಅಧಿಕ ಗದ್ದೆಗಳನ್ನು ಗೇಣಿಗೆ ಪಡೆದು ಕಳೆದ 17 ವರ್ಷಗಳಿಂದ ಭತ್ತದ ಬೇಸಾಯ ಮಾಡುತ್ತಿದ್ದಾರೆ. ಹಂಗಳೂರಿನಲ್ಲಿ ಇಲೆಕ್ಟ್ರಿಕಲ್ ಹಾಗೂ ಡೆಕೋರೇಶನ್ ಉದ್ಯಮ ನಡೆಸುತ್ತಿರುವ ಗಂಗಾಧರ ಪೂಜಾರಿಯವರು ಮಳೆಗಾಲದಲ್ಲಿ ಪ್ರತಿ ವರ್ಷವೂ ನಾಟಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಸ್ವತಃ ಟಿಲ್ಲರ್ ಮೇಲೆ ಕೂತು ಗದ್ದೆ ಉಳುಮೆ ಮಾಡುವುದರಿಂದ ಹಿಡಿದು ಭತ್ತದ ನಾಟಿಗೆ ಪೂರಕವಾದ ಎಲ್ಲ ಕೆಲಸಗಳನ್ನು ಮಾಡುವ ಗಂಗಾಧರ ಪೂಜಾರಿಯವರ ಕೃಷಿ ಕಾಯಕಕ್ಕೆ ಅವರ ಚಿಕ್ಕಪ್ಪ ಶಂಕರ ಪೂಜಾರಿ ಹಾಗೂ ಸಹೋದರ ಗೋವಿಂದ ಪೂಜಾರಿ ಸಹ ಸಾಥ್ ನೀಡುತ್ತಿದ್ದಾರೆ.
ಗಂಗಾಧರ ಪೂಜಾರಿಯವರ ತಂದೆ ಗಣಪ ಪೂಜಾರಿ ವೃತ್ತಿಪರ ಕೃಷಿಕರಾಗಿ ಕೋಡಿ ಭಾಗದಲ್ಲಿ ಹೆಸರು ಮಾಡಿದವರು. ಅವರ ನೆಚ್ಚಿನ ಕಾಯಕವಾಗಿರುವ ಕೃಷಿಯನ್ನು ಅವರ ಕಾಲಾ ಅನಂತರ ಗಂಗಾಧರ ಪೂಜಾರಿಯವರು ಮುಂದುವರಿಸಿದ್ದಾರೆ. ತಮ್ಮಲ್ಲಿರುವ ಗದ್ದೆಗಳೊಂದಿಗೆ ಮನೆಯ ಸುತ್ತಮುತ್ತಲಿನ ಕೃಷಿಭೂಮಿಯನ್ನೂ ಗೇಣಿ ಪಡೆದು ನಾಟಿ ಮಾಡುತ್ತಿದ್ದಾರೆ. ಇವರ ಕೃಷಿ ಪ್ರೀತಿಗೆ ತಂದೆಯೇ ಸ್ಫೂರ್ತಿಯಾಗಿದ್ದಾರೆ.