ಅಮರಾವತಿ: ಬ್ಯಾಂಕ್‌ಗಳಲ್ಲಿ ಸಾಲ ನೀಡಲಿಲ್ಲ ಎಂಬ ಕಾರಣಕ್ಕಾಗಿ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ವುಯ್ಯೂರು ಪಟ್ಟಣದಲ್ಲಿ ಹಲವು ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮುಂದೆ ಕಸ ತಂದು ಸುರಿಯಲಾಗಿದೆ. ಆಂಧ್ರಪ್ರದೇಶ ಸರಕಾರ ಜಾರಿಗೊಳಿಸಿರುವ “ಜಗನನ್ನ ತೋಡು’ ಎಂಬ ಯೋಜನೆಯಡಿ ಸಾಲ ನೀಡಲಿಲ್ಲ ಎಂಬ ಕಾರಣಕ್ಕಾಗಿ ಕ್ರುದ್ಧಗೊಂಡು ವಿಶೇಷವಾಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಸಾಲ ನೀಡಲಿಲ್ಲ ಎಂದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು, ಕಲ್ಲೆಸೆತ ಮುಂತಾದ ಪ್ರತಿಭಟನೆ ನಡೆಸುವ ಈ ದಿನಮಾನಗಳಲ್ಲಿ ವಯ್ಯೂರು ಪಟ್ಟಣದಲ್ಲಿ ನಡೆದಿರುವ ಘಟನೆ ಅಚ್ಚರಿ ಹುಟ್ಟಿಸಿದೆ.
ಕೊರೊನಾದಿಂದಾಗಿ ಸಂಕಷ್ಟಕ್ಕೆ ಒಳಗಾದವರಿಗೆ ನೆರವು ನೀಡುವ ನಿಟ್ಟಿನಲ್ಲಿ ತಳ್ಳು ಬಂಡಿಯ ವ್ಯಾಪಾರಸ್ಥರು, ರಸ್ತೆ ಬದಿಯಲ್ಲಿ ಹೂ-ಹಣ್ಣು ಮಾರಾಟ ಮಾಡುವವರು, ಸಣ್ಣ ವ್ಯಾಪಾರಸ್ಥರಿಗೆ ನೆರವು ನೀಡುವ ಉದ್ದೇಶದಿಂದ ಆಂಧಪ್ರದೇಶ ಸರಕಾರ ಈ ಯೋಜನೆ ಜಾರಿ ಮಾಡಿದೆ.
ಬ್ಯಾಂಕ್‌ಗಳ ಮ್ಯಾನೇಜರ್‌ಗಳು ಕಸ ಆಯುವವರಿಗೆ ಈ ಯೋಜನೆಯ ಅನ್ವಯ ಸಾಲ ನೀಡಲು ಒಪ್ಪುತ್ತಿಲ್ಲ ಎಂದು ಕಸ ಆಯುವವರ ಪ್ರಧಾನ ಆರೋಪ. ಸದ್ಯ ವುಯ್ಯೂರು ಪಟ್ಟಣದಲ್ಲಿ ನಡೆದ ವಿಶೇಷ ಪ್ರತಿಭಟನೆಯೇ ಚರ್ಚೆಯ ವಸ್ತು. ಅಖೀಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ (ಎಐಬಿಇಎ) ಘಟನೆಯನ್ನು ಖಂಡಿಸಿದ್ದು, “ಇದೊಂದು ಅರಾಜಕತೆಯ ಸಂಕೇತ’ ಎಂದು ಬಣ್ಣಿಸಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗಮನಕ್ಕೂ ಕಸ ಎಸೆದ ಪ್ರಕರಣ ಬಂದಿದೆ. ಆಂಧ್ರಪ್ರದೇಶ ವಿತ್ತ ಸಚಿವ ಬಗ್ಗನ ರಾಜೇಂದ್ರನಾಥ ರೆಡ್ಡಿ ಅವರಿಗೆ ಫೋನ್ ಮಾಡಿ ತರಾಟೆಗೆ ತಗೆದುಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ರೆಡ್ಡಿ ಇಂಥ ಘಟನೆ ನಡೆಯದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.