ಚಿತ್ರರಂಗಕ್ಕೆ ನಿರ್ದೇಶಕರಾಗಬೇಕು ಅಂತ ಬಂದರಂತೆ ಎಂ.ಎಸ್. ತ್ಯಾಗರಾಜ್. ಆದರೆ, ಅವರು ಆಗಿದ್ದು ಸಂಗೀತ ನಿರ್ದೇಶಕ. ಒಂದಿಷ್ಟು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದರೂ, ಅವರಿಗೆ ಒಂದು ಚಿತ್ರ ನಿರ್ದೇಶಿಸಬೇಕು ಎಂಬ ಆಸೆ ಒಳಗೆ ಕುದಿಯುತ್ತಲೇ ಇತ್ತಂತೆ. ಆ ಆಸೆ ಈಗ ಕೊನೆಗೂ ಈಡೇರಿದೆ. ತ್ಯಾಗರಾಜ್ ಸದ್ದಿಲ್ಲದೆ ಒಂದು ಚಿತ್ರ ಮಾಡಿ ಮುಗಿಸಿದ್ದಾರೆ. ಆ ಚಿತ್ರದ ಹೆಸರು “ಕವಿ’. ಇತ್ತೀಚೆಗೆ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಆ ನೆಪದಲ್ಲಿ ಚಿತ್ರತಂಡದವರು ಮಾಧ್ಯಮದವರೆದುರು ಬಂದಿದ್ದಾರೆ.
ಅಂದಹಾಗೆ, “ಕವಿ’ ಚಿತ್ರಕ್ಕೆ ತ್ಯಾಗರಾಜ್ ಅವರೇ ಸಂಗೀತ ಸಂಯೋಜಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ಕಥೆಯೂ ಅವರದ್ದೇ. “ಕವಿ’ ಎಂಬ ಹೆಸರು ಕೇಳುತ್ತಿದ್ದಂತೆಯೇ ಇದೊಂದು ಕಾವ್ಯಾತ್ಮಕ ಸಿನಿಮಾ ಎಂಬ ಅಂದಾಜು ಬರಬಹುದು. ಹಾಗೇನಿಲ್ಲ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರವಂತೆ. “ಎಲ್ಲರೊಳಗೂ ಒಬ್ಬ ಕವಿ ಇರುತ್ತಾನೆ. ಆದರೆ, ಬಹಳಷ್ಟು ಜನರಿಗೆ ಅದು ಗೊತ್ತಿರುವುದಿಲ್ಲ. ಆ ಕವಿಯನ್ನು ಸಮಯಕ್ಕೆ ಸರಿಯಾಗಿ ಹೊರಗೆ ಬಿಟ್ಟಾಗ ಮನಸ್ಸು ಹಗುರವಾಗುತ್ತದೆ. ಈ ಎಳೆ ಇಟ್ಟುಕೊಂಡು ಕಥೆ ಮಾಡಿದ್ದೇನೆ’ ಎನ್ನುತ್ತಾರೆ ತ್ಯಾಗರಾಜ್.
ಈ ಚಿತ್ರಕ್ಕೆ ನಾಯಕ ಪುನೀತ್ ಗೌಡ. ನಾಯಕರಷ್ಟೇ ಅಲ್ಲ, ಈ ಚಿತ್ರದ ನಿರ್ಮಾಪಕರೂ ಅವರೇ. ಪುನೀತ್‌ಗೆ ತ್ಯಾಗರಾಜ್ ಹೇಳಿದ ಕಥೆ ಬಹಳ ಇಷ್ಟವಾಗಿದೆ. ಅದೇ ಕಾರಣಕ್ಕೆ ಚಿತ್ರವನ್ನು ನಿರ್ಮಿಸುವುದಕ್ಕೆ ಅವರು ಮುಂದಾಗಿದ್ದಾರೆ. ಇನ್ನು ಅವರಿಗೆ ನಾಯಕಿಯಾಗಿ “ಎಟಿಎಂ’ ಖ್ಯಾತಿಯ ಶೋಭಿತಾ ಇದ್ದಾರೆ. “ಇಲ್ಲಿ ನನ್ನ ಪಾತ್ರ ಬಹಳ ಚೆನ್ನಾಗಿದೆ. ನನ್ನ ಮನೆಯವರು ನನ್ನನ್ನ ಒಬ್ಬ ಕವಿಗೆ ಕೊಟ್ಟು ಮದುವೆ ಮಾಡಬೇಕು ಅಂತ ಆಸೆಪಡುತ್ತಿರುತ್ತಾರೆ. ಆ ಸಂದರ್ಭದಲ್ಲಿ ನಾಯಕ ಸಿಗುತ್ತಾನೆ. ಅವನು ಕವಿ ಎಂದುಕೊಂಡು ಪ್ರೀತಿಸುತ್ತೇನೆ. ಆದರೆ, ಅಲ್ಲ ಎಂಬುದು ಕೊನೆಗೆ ಗೊತ್ತಾಗುತ್ತದೆ. ನಮ್ಮಿಬ್ಬರ ನಡುವೆ ಬ್ರೇಕ್ ಅಪ್ ಆಗುತ್ತದೆ. ಕೊನೆಗೆ ಅವನು ಕವಿ ಆಗುತ್ತಾನೆ’ ಎಂದು ವಿವರಿಸಿದರು ಅವರು.
ಈ ಚಿತ್ರದ ಶೇ 75ರಷ್ಟು ಭಾಗವನ್ನು ತೀರ್ಥಹಳ್ಳಿಯಲ್ಲಿ ಚಿತ್ರೀಕರಣ ಮಾಡಿದರೆ, ಬೆಂಗಳೂರಿನಲ್ಲೂ ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣ ಮಾಡಲಾಗಿದೆ. ತ್ಯಾಗರಾಜು, ಮಧುಸೂಧನ್ ಮತ್ತು ಪ್ರೇಮ್ ಖುಷಿ ಸಾಹಿತ್ಯ ಬರೆದಿದ್ದಾರೆ. ಇನ್ನು ಉಮೇಶ್, ರಾಕ್‌ಲೈನ್ ಸುಧಾಕರ್, ಮಹೇಶ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.