ಚಿಕ್ಕಬಳ್ಳಾಪುರ: ಜಿಲ್ಲೆಯ ಪಡಿತದಾರರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಕೇವಲ ಅಕ್ಕಿ ಮಾತ್ರ ವಿತರಿಸಿದ್ದು, ತೊಗರಿ ಬೇಳೆ ವಿತರಿಸದಿರುವುದು ಬೆಳಕಿಗೆ ಬಂದಿದೆ. ಇದರಿಂದ ಬರದಿಂದ ತತ್ತರಿಸಿರುವ ಜನ ಸಾಮಾನ್ಯರು ಅದರಲ್ಲೂ ಕೂಲಿ ಕಾರ್ಮಿಕರು ತೊಗರಿ ಬೇಳೆ ಇಲ್ಲದೇ ಪರದಾಬೇಕಾಗಿದೆ.
ಪಡಿತರದಾರರ ಆಕ್ರೋಶ: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ತಲಾ 7 ಕೆ.ಜಿ. ಅಕ್ಕಿ ಜತೆಗೆ ಪ್ರತಿ ಪಡಿತರ ಚೀಟಿಗೂ ತಲಾ 1 ಕೆ.ಜಿ. ತೊಗರಿ ಬೇಳೆ, 1 ಕೆ.ಜಿ. ಸೂರ್ಯಕಾಂತಿ ಎಣ್ಣೆ, ಉಪ್ಪು ಮತ್ತಿತರ ಆಹಾರ ಪದಾರ್ಥಗಳನ್ನು ವಿತರಿಸುತ್ತಿದೆ. ಆದರೆ ಜಿಲ್ಲೆಗೆ ರಾಜ್ಯದ ಆಹಾರ ನಾಗರಿಕರ ಸರಬರಾಜು ಇಲಾಖೆ ತೊಗರಿ ಪೂರೈಸದ ಕಾರಣ ಜಿಲ್ಲೆಯ ಪಡಿತರದಾರರಿಗೆ ನ್ಯಾಯ ಬೆಲೆ ಅಂಗಡಿ ಮಾಲೀಕರು ಬರೀ ಅಕ್ಕಿ ಮಾತ್ರ ವಿತರಿಸುತ್ತಿರುವುದು ಈಗ ಪಡಿತರದಾರರ ಆಕ್ರೋಶಕ್ಕೆ ಕಾರಣವಾಗಿದೆ.
ಈ ವರ್ಷದಲ್ಲಿ ಜಿಲ್ಲೆಯಲ್ಲಿ ಬರಗಾಲ ಆವರಿಸಿ ಮಳೆ, ಬೆಳೆ ಇಲ್ಲದೇ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಗ್ರಾಮೀಣ ಭಾಗದ ಕೃಷಿ ಕೂಲಿ ಕಾರ್ಮಿಕರ ಲಕ್ಷಾಂತರ ಕುಟುಂಬಗಳು ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸುವ ಅಕ್ಕಿ, ತೊಗರಿ ಬೇಳೆಯನ್ನು ಆಶ್ರಯಿಸಿಕೊಂಡಿವೆ. ಆದರೆ ಸರ್ಕಾರದ ಮಟ್ಟದಲ್ಲಿ ತೊಗರಿ ಬೇಳೆ ಪೂರೈಕೆ ಸಂಬಂಧ ಟೆಂಡರ್ ಪ್ರಕ್ರಿಯೆ ಮುಗಿಯದ ಕಾರಣ ಜಿಲ್ಲೆಗೆ ಹೊಸ ವರ್ಷದ ಜನವರಿಯಿಂದ ತೊಗರಿ ಬೇಳೆ ಗಗನ ಕುಸುಮವಾಗಿದೆ.
ಜಿಲ್ಲೆಯಲ್ಲಿವೆ 3 ಲಕ್ಷ ಕುಟುಂಬಗಳು: ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಹಾಗೂ ಅಂತ್ಯೋದಯ ಪಡಿತರ ಚೀಟಿಗಳನ್ನು ಹೊಂದಿರುವ ಒಟ್ಟು 3 ಲಕ್ಷಕ್ಕೂ ಅಧಿಕ ಕುಟುಂಬಗಳು ಇವೆ. ಪ್ರತಿ ಕುಟುಂಬಕ್ಕೂ ಪ್ರತಿ ತಿಂಗಳು ತಲಾ 1 ಕೆ.ಜಿ. ತೊಗರಿ ಬೇಳೆಯನ್ನು ವಿತರಿಸಲಾಗುತ್ತಿತ್ತು. ಈ ಬಾರಿಯೂ ತೊಗರಿ ವಿತರಿಸುವುದಾಗಿ ಆಹಾರ ಮತ್ತು ನಾಗರಿಕ ಸಬರರಾಜು ಇಲಾಖೆ ಜಿಲ್ಲೆಯ ಪ್ರತಿ ಪಡಿತರದಾರರಿಗೆ ಮೊಬೈಲ್ ಮೂಲಕ ಸಂದೇಶ ಕೂಡ ಕಳಿಸಿಕೊಟ್ಟಿದೆ.
ಆದರೆ ನ್ಯಾಯ ಬೆಲೆ ಅಂಗಡಿಗಳಿಗೆ ತೆರಳುತ್ತಿರುವ ಗ್ರಾಹಕರಿಗೆ ಮಾತ್ರ ಬರೀ ಅಕ್ಕಿಯ ದರ್ಶನವಾಗುತ್ತಿದ್ದು, ಈ ಬಾರಿ ತೊಗರಿ ಬಂದಿಲ್ಲ ಎಂಬ ಮಾತು ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಕೇಳಿ ಬರುತ್ತಿದೆ. ಜಿಲ್ಲೆಯಲ್ಲಿ 800 ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಿದರೆ ಕೆಲವು ಗ್ರಾಮಗಳಲ್ಲಿ ವಿಎಸ್‌ಎಸ್‌ಎನ್ ಹಾಗೂ ಟಿಎಪಿಸಿಎಂಎಸ್ ಮೂಲಕವು ಜನತೆಗೆ ಪಡಿತರ ವಿತರಿಸಲಾಗುತ್ತಿದೆ.
ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರಿಗೆ ತೂಕದಲ್ಲಿ, ಗುಣಮಟ್ಟದಲ್ಲಿ ಮೋಸ, ವಂಚನೆ ಪ್ರಕರಣಗಳು ನಡೆಯುತ್ತಿವೆ. ಇದೀಗ ಅಕ್ಕಿ ಮಾತ್ರ ಕೊಟ್ಟು ತೊಗರಿ ಬೇಳೆ ವಿತರಿಸದಿರುವುದು ಜನಸಾಮಾನ್ಯರನ್ನು ಚಿಂತೆಗೀಡು ಮಾಡಿದೆ.
ಒಟ್ಟಿನಲ್ಲಿ ಬರಗಾಲದಿಂದ ತತ್ತರಿಸಿ ಬದುಕಿನ ಬಂಡಿ ಮುನ್ನಡೆಸಲು ಕಷ್ಟವಾಗಿರುವ ಜಿಲ್ಲೆಯ ರೈತಾಪಿ ಜನತೆಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸುತ್ತಿದ್ದ ತೊಗರಿ ಬೇಳೆ ಸಾಕಷ್ಟು ಆಸರೆ ಆಗುತ್ತಿತ್ತು. ಇದೀಗ ಸರ್ಕಾರದ ಮಟ್ಟದಲ್ಲಿಯೇ ಟೆಂಡರ್ ಸಮಸ್ಯೆಯಿಂದ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿದ್ದ ತೊಗರಿ ಈ ಬಾರಿ ಕೈ ಕೊಟ್ಟಿರುವುದು ಸಹಜವಾಗಿಯೇ ಗ್ರಾಮೀಣ ಭಾಗದ ಜನರನ್ನು ಚಿಂತೆಗೀಡು ಮಾಡಿದೆ.