ಬೆಂಗಳೂರು: ಮೊಹಮ್ಮದ್ ನಲಪಾಡ್ ವಿರುದ್ಧದ ಹಲ್ಲೆ ಪ್ರಕರಣ ಸಂಬಂಧ ಶನಿವಾರ ಸಿಸಿಬಿ ಪೊಲೀಸರು ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಸಹೋದರ ಸಾತ್ವಿಕ್ ಹೇಳಿಕೆ ಪಡೆದಿದ್ದಾರೆ. “ಮೊಹಮ್ಮದ್ ನಲಪಾಡ್ ಮತ್ತು ಸಹಚರರು ಸಹೋದರ ವಿದ್ವತ್ ಮಾತ್ರವಲ್ಲದೇ, ಆಸ್ಪತ್ರೆಗೆ ಹೋದಾಗ ನನ್ನ ಮೇಲೂ ಹಲ್ಲೆ ನಡೆಸಿªದ್ದಾರೆ’ ಎಂದು ಅಂದು ಆಸ್ಪತ್ರೆಯಲ್ಲಿ ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ.
ವಿದ್ವತ್ ಮೇಲೆ ಹಲ್ಲೆ ಬಳಿಕ ಆತನ ಸ್ನೇಹಿತರು ಕರೆ ಮಾಡಿ ವಿಷಯ ತಿಳಿಸಿದರು. ಕೂಡಲೇ ಆಸ್ಪತ್ರೆಗೆ ತೆರಳಿದೆ. ತುರ್ತು ನಿಗಾ ಘಟಕದಲ್ಲಿ ವಿದ್ವತ್ ದಾಖಲಾಗಿದ್ದ. ಇದೇ ವೇಳೆ ತನ್ನ ಸಹಚರರ ಜತೆ ಆಸ್ಪತ್ರೆಗೆ ಬಂದ ಮೊಹಮ್ಮದ್ ನಲಪಾಡ್, ಆಸ್ಪತ್ರೆ ಸಿಬ್ಬಂದಿ ಮತ್ತು ವಿದ್ವತ್ ಸ್ನೇಹಿತರ ವಿರುದ್ಧ ಕೂಗಾಡುತ್ತಿದ್ದ ಇದನ್ನು ಗಮನಿಸಿದ ನಾನು ಇದು ಆಸ್ಪತ್ರೆ, ಹೊರಗೆ ಹೋಗಿ ಎಂದು ಹೇಳಿದೆ.
ಆಗ ಮತ್ತಷ್ಟು ಏರು ಧ್ವನಿಯಲ್ಲಿ ಧಮ್ಕಿ ಹಾಕಲು ಯತ್ನಿಸಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಹಲ್ಲೆ ನಡೆಸಿದರು. ಅಲ್ಲದೇ, ಘಟನೆ ಸಂಬಂಧ ಪೊಲೀಸ್ ಕಂಪ್ಲೆಟ್ ಏನಾದರು ಕೊಟ್ಟರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೆದರಿಸಿದರು ಎಂದು ಸಾತ್ವಿಕ್ ಹೇಳಿಕೆ ನೀಡಿದ್ದಾರೆ.
ಅಲ್ಲದೇ, ಇದೇ ಸಂದರ್ಭದಲ್ಲಿ ಡಾ ರಾಜ್‌ಕುಮಾರ್ ಮೊಮ್ಮಗ ಗುರು ಬಂದರು. ಆಗ ಆತನ ಜತೆ ಅನುಚಿತವಾಗಿ ವರ್ತಿಸುತ್ತಿರುವಾಗ ಗುರು, ನಾನು ರಾಜ್‌ಕುಮಾರ್ ಮೊಮ್ಮಗ ಎಂದು ಹೇಳುತ್ತಿದ್ದಂತೆ ಎಲ್ಲರೂ ಸ್ಥಳದಿಂದ ಹೊರಟು ಹೋದರು ಎಂದು ಸಾತ್ವಿಕ್ ಹೇಳಿದ್ದಾರೆ.
ಇನ್ನು ವಿದ್ವತ್ ತಂದೆ ಲೋಕನಾಥ್ ಹೇಳಿಕೆ ಕೂಡ ಪಡೆಯಲಾಗಿದ್ದು, ಘಟನೆ ಬಗ್ಗೆ ಪುತ್ರ ಸಾತ್ವಿಕ್ ಕರೆ ಮಾಡಿ ವಿಷಯ ತಿಳಿಸಿದ ಕೂಡಲೇ ಸ್ಥಳಕ್ಕೆ ಬಂದಿದ್ದೇನೆ ಎಂದಷ್ಟೇ ಹೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಮೀನು ಅರ್ಜಿ ಸಲ್ಲಿಕೆ: ಆರೋಪಿ ಮೊಹಮ್ಮದ್ ಮತ್ತು ಇತರೆ 7 ಮಂದಿ ಆರೋಪಿಗಳು ಸೋಮವಾರ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಶುಕ್ರವಾರ 63ನೇ ಸೆಷನ್ಸ್ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನಿರಾಕರಿಸಿತ್ತು.
ಮತ್ತೂಂದೆಡೆ ಇದುವರೆಗೂ ಗಾಯಾಳು ವಿದ್ವತ್, ಈತನ ಸ್ನೇಹಿತರು ಸೇರಿದಂತೆ ಪ್ರಮುಖ ಸಾಕ್ಷ್ಯಾಧಾರಗಳ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಸೋಮವಾರ ಎಲ್ಲ ಸಾಕ್ಷ್ಯಾಧಾರಗಳ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.