ಮೈಸೂರು: ಈ ಸರ್ಕಾರಕ್ಕೆ ಬೇರೆ ವಿಚಾರಕ್ಕೆ ನೀತಿ ಸಂಹಿತೆ ಅಡ್ಡಿಯಾಗಲ್ಲ, ರೈತರಿಗೆ ಪರಿಹಾರ ಕೊಡಲು ನೀತಿ ಸಂಹಿತೆ ಅಡ್ಡಿಯಾಗುತ್ತದೆ. ನೀತಿ ಸಂಹಿತೆ ನೆಪ ಬಿಟ್ಟು ನೆರೆ ಸಂತ್ರಸ್ಥರಿಗೆ ನೆರವಾಗಿ, ಈ ಬೂಟಾಟಿಕೆ ಬಿಟ್ಟು ರೈತರಿಗೆ ಸೂಕ್ತ ಪರಿಹಾರ ನೀಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 5 ರಿಂದ 6 ಲಕ್ಷ ಹೆಕ್ಟೇರ್ ನಷ್ಟು ಆಗಿದೆ. ಗೈಡ್ ಲೈನ್ ವರದಿ ಇಟ್ಟುಕೊಂಡು ಪರಿಹಾರ ಕೊಡುವುದು ಸರಿಯಲ್ಲ. ಮೊದಲು ಅದನ್ನು ಬದಿಗೊತ್ತಿ ನಷ್ಟವಾಗಿರುವ ಬಗ್ಗೆ ಪರಿಹಾರ ಕೊಡಿ. ರಾಜ್ಯದಲ್ಲಿ ರಸ್ತೆ, ಸೇತುವೆ ಹಾಳಾಗಿದೆ. 20ಕ್ಕು ಹೆಚ್ಚು ಜನರು ಸತ್ತಿದ್ದಾರೆ. ಸರ್ಕಾರದಲ್ಲಿರುವ ಮಂತ್ರಿಗಳು ಕಾಟಾಚಾರಕ್ಕೆ ಸರ್ವೆ ಮಾಡಬಾರದು. ಈಗಾಗಲೇ ಸಚಿವರು ಹೋಗಿ ಸರ್ವೆ ಮುಗಿಸಬೇಕಿತ್ತು. ಆದರೆ ಈವರೆಗೂ ಸರ್ಕಾರ ಆ ಕೆಲಸ ಮಾಡಿಲ್ಲ ಎಂದರು.
ತಿರಸ್ಕಾರ ಮಾಡುವ ಮುನ್ನ ಎಚ್ಚೆತ್ತುಕೊಳ್ಳಿ: ಈ ಸರ್ಕಾರದಲ್ಲಿ ಕೇವಲ ಘೋಷಣೆ ಮಾತ್ರ ಇದೆ. ಸ್ಥಳಕ್ಕೆ ಹೋಗಿ ಪರಿಹಾರ ಘೋಷಣೆ ಮಾಡುತ್ತಾರೆ. ಸರ್ಕಾರಕ್ಕೆ ಆಕಾಶ ಮಾತ್ರ ಕಾಣುತ್ತಿದೆ, ಭೂಮಿ ಕಾಣ್ತಿಲ್ಲ. ಚುನಾವಣೆಯಲ್ಲಿ ಗೆದ್ದಿದ್ದೀವಿ, ಗೆಲ್ಲುತ್ತೀವೆ ಎಂಬ ಭ್ರಮೆಯಲ್ಲಿದ್ದಾರೆ. ಎಲ್ಲದಕ್ಕೂ ಒಂದು ಮಿತಿ ಇದೆ. ಜನರು ರೊಚ್ಚಿಗೆದ್ದು ನಿಮ್ಮನ್ನ ತಿರಸ್ಕಾರ ಮಾಡುವ ಮುನ್ನ ಎಚ್ಚೆತ್ತುಕೊಳ್ಳಿ. ರೈತರಿಗೆ ಪರಿಹಾರ ಕೊಡುವುದರಲ್ಲಿ ನೀತಿ ಸಂಹಿತೆ ಅಡ್ಡ ಬರಲ್ಲ. ಇದನ್ನ ಚುನಾವಣಾ ಆಯೋಗದ ಅನುಮತಿ ಪಡೆದು ಪರಿಹಾರ ಕೊಡಬಹುದು. ಸರ್ಕಾರದಲ್ಲಿ ಹಣ ಇಲ್ಲ ಅಂತಾರೆ. ಆದರೆ ನನ್ನ ಪ್ರಕಾರದಲ್ಲಿ ಸರ್ಕಾರದಲ್ಲಿ ಹಣ ಇದೆ ಎಂದರು.
ಜೆಡಿಎಸ್ ಬಾಗಿಲು ಕ್ಲೋಸ್: ಸಂದೇಶ ನಾಗರಾಜ್ ಅವರು ಪಕ್ಷ ಬಿಟ್ಟು ಈಗಾಗಲೇ ಮೂರು ವರ್ಷ ಕಳೆದಿದೆ. ನನ್ನನ್ನು ಅವರು ಸಂಪರ್ಕ ಮಾಡಿಲ್ಲ, ನಾನು ಮಾಡಲ್ಲ. ಅವರಿಗೆ ಜೆಡಿಎಸ್ ಬಾಗಿಲು ಕ್ಲೋಸ್. ಇಂದು ಸಂಜೆ ಜೆಡಿಎಸ್ ಸಭೆ ಇದೆ ಅಲ್ಲಿ ಅಭ್ಯರ್ಥಿ ತೀರ್ಮಾನವಾಗುತ್ತದೆ. ಸಂದೇಶ ನಾಗರಾಜ್ ಬೇರೆ ಯಾರ ಜೊತೆ ಸಂಪರ್ಕ ಇದ್ದಾರೆ ಗೊತ್ತಿಲ್ಲ. ಅವರು ಯಾರನ್ನೆ ಸಂಪರ್ಕ ಮಾಡಿದರು ಅದು ನನಗೆ ಗೊತ್ತಿಲ್ಲ ಎಂದು ಎಚ್ ಡಿಕೆ ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರಕ್ಕೂ ನನಗು ಅವಿನಾಭಾವ ಸಂಬಂಧ ಇದೆ. 2006ರಿಂದಲು ನನಗೆ ಚಾಮುಂಡೇಶ್ವರಿ ಕ್ಷೇತ್ರದ ಜೊತೆ ನಂಟಿದೆ. 2013ರಲ್ಲೇ ನಾನು ಮಂಜೇಗೌಡರನ್ನ ಅಭ್ಯರ್ಥಿಯಾಗಿ ನಿಲ್ಲಿಸುತ್ತಿದ್ದೆ. ಕಾರಣಾಂತರದಿಂದ ಅಂದು ಅದು ಸಾಧ್ಯವಾಗಲಿಲ್ಲ. ಇದೀಗ ನಮ್ಮ ಪಕ್ಷಕ್ಕೆ ಬರಲು ಅರ್ಜಿ ಹಾಕಿದ್ದಾರೆ. ಇಂದು ಸಂಜೆ ನಡೆಯುವ ಪಕ್ಷದ ಮುಖಂಡರ ಸಭೆಯಲ್ಲಿ ಇದನ್ನ ತೀರ್ಮಾನ ಮಾಡುತ್ತೇವೆ. ಕಾರ್ಯಕರ್ತರು, ಮುಖಂಡರು ನೀಡುವ ಸಲಹೆ ಮೇರೆಗೆ ಅಭ್ಯರ್ಥಿ ಆಯ್ಕೆ ಆಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.