ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಭದ್ರತೆ ಒದಗಿಸಲು ಪೊಲೀಸ್ ಇಲಾಖೆಗೆ ಸಿಬ್ಬಂದಿ ಕೊರತೆ ಎದುರಾಗಿದೆ. ಎಚ್.ಡಿ.ದೇವೇಗೌಡ ಹಾಗೂ ಅವರ ಕುಟುಂಬ ಸದಸ್ಯರ ಭದ್ರತೆಗೆ ಶಿಷ್ಟಾಚಾರ ಪ್ರಕಾರ 156 ಸಿಬ್ಬಂದಿ ನಿಯೋಜಿಸಬೇಕು. ಆದರೆ, ವಾಸ್ತವವಾಗಿ ಇರುವುದು 60 ಸಿಬ್ಬಂದಿ ಮಾತ್ರ. ಉಳಿದ ಸಿಬ್ಬಂದಿ ನಿಯೋಜನೆ ಮೇರೆಗೆ ಬೇರೆಡೆ ಕಾರ್ಯನಿರ್ವಹಿಸುತ್ತಿದ್ದಾರೆ.
ಒಬ್ಬರು ಡಿಸಿಪಿ, ಇಬ್ಬರು ಎಸಿಪಿ ಭದ್ರತಾ ಕಾರ್ಯಕ್ಕೆ ನಿಯೋಜಿಸಬೇಕಿದ್ದರೂ ಎಸಿಪಿಗಳ ಬದಲಿಗೆ ಇನ್ಸ್‌ಪೆಕ್ಟರ್‌ಗಳನ್ನು ನಿಯೋಜಿಸಲಾಗಿದೆ. ಮುಖ್ಯಪೇದೆ, ಪೇದೆಗಳ ಸಂಖ್ಯೆಯೂ ಕಡಿಮೆಯಿದೆ ಎಂದು ಹೇಳಲಾಗಿದೆ. ಮೊದಲು ಝಡ್ ಫ್ಲಸ್ ಶ್ರೇಣಿ ಭದ್ರತೆ ದೇವೇಗೌಡರಿಗೆ ಒದಗಿಸಲಾಗಿತ್ತು. ಆಗ 261 ಸಿಬ್ಬಂದಿ ಒದಗಿಸಲಾಗಿತ್ತು. ಆ ನಂತರ ದೇವೇಗೌಡರೇ ತಮಗೆ ಝಡ್ ಶ್ರೇಣಿ ಸಾಕು ಎಂದು ಹೇಳಿದ್ದರು.
ಆಗ 156 ಸಿಬ್ಬಂದಿ ನೇಮಿಸಲಾಗಿತ್ತು. 156 ಸಿಬ್ಬಂದಿಯ ಪೈಕಿ ಇದೀಗ 60 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ದೇವೇಗೌಡ, ಪತ್ನಿ ಚೆನ್ನಮ್ಮ, ಪುತ್ರರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಮಾತ್ರ ಭದ್ರತೆ ಒದಗಿಸಿದ್ದು ಇತರೆ ಸದಸ್ಯರಿಗೆ ಭದ್ರತೆ ಒದಗಿಸಲು ಸಿಬ್ಬಂದಿ ಕೊರತೆ ಎದುರಾಗಿದೆ ಎನ್ನಲಾಗಿದೆ.
ಶಿಷ್ಟಾಚಾರದ ಪ್ರಕಾರ ಭದ್ರತೆ ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ದೇವೇಗೌಡರ ಕುಟುಂಬಕ್ಕೆ ಭದ್ರತೆ ಒದಗಿಸುವ ವಿಚಾರದಲ್ಲಿ ಸಿಬ್ಬಂದಿ ಕೊರತೆ ಸರ್ಕಾರ ಅಥವಾ ಗೃಹ ಇಲಾಖೆ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಬಗ್ಗೆ ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳು ಗಮನಹರಿಸಬೇಕು.
-ರಮೇಶ್‌ಬಾಬು, ವಿಧಾನಪರಿಷತ್ ಸದಸ್ಯ