Advertisement

ಸಾಹಿತ್ಯ ಕ್ಷೇತ್ರಕ್ಕೆ ಹವ್ಯಕರ ಕೊಡುಗೆ ದೊಡ್ಡದು

06:25 AM Dec 29, 2018 | Team Udayavani |

ಬೆಂಗಳೂರು: ಉದ್ಯಾನ ನಗರಿಯ ಅರಮನೆ ಮೈದಾನದ ರಾಯಲ್‌ ಸೆನೆಟ್‌ ಹಾಲ್‌ನಲ್ಲಿ ಎರಡನೇ ವಿಶ್ವ ಹವ್ಯಕ ಸಮ್ಮೇಳನ ಪ್ರಯುಕ್ತ ದಾಖಲೆಯ 100 ಲೇಖಕರ ಪುಸ್ತಕಗಳನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು. 

Advertisement

ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಡಾ.ಮಲ್ಲೇಪುರಂ ಜಿ. ವೆಂಕಟೇಶ್‌, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಹಿರಿಯ ಸಾಹಿತಿ, ವಿದ್ಯಾ ವಾಚಸ್ಪತಿ ಡಾ. ಅರಳು ಮಲ್ಲಿಗೆ ಪಾರ್ಥ ಸಾರಥಿ, ಅಖೀಲ ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ.ಗಿರಿಧರ ಕಜೆ ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲೇಪುರಂ ಜಿ. ವೆಂಕಟೇಶ್‌, ಲೇಖಕ ದೇಶದ ಆಸ್ತಿ. ಅದೇ ರೀತಿ ಹವ್ಯಕ ಸಮಾಜ ದೇಶದ ಆಸ್ತಿ ಎನ್ನುವುದಕ್ಕೆ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾದ 100 ಪುಸ್ತಕಗಳೇ ಸಾಕ್ಷಿ ಎಂದು ಕೊಂಡಾಡಿದರು. ಸಾಹಿತ್ಯ ಮತ್ತು ಸಾಹಿತಿಯ ನಡುವೆ ಅವಿನಾಭಾವ ಸಂಬಂಧ ಇದೆ.

ಸಾಹಿತಿ ಇಲ್ಲದೆ ಸಾಹಿತ್ಯವನ್ನು ನೋಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಅವರು, ಸಾಹಿತ್ಯ ಕ್ಷೇತ್ರಕ್ಕೆ ಸಮುದಾಯದ ಕೊಡುಗೆ ಅನನ್ಯ. ಅದರಲ್ಲೂ ಯಕ್ಷಗಾನ ಕ್ಷೇತ್ರ, ವೇದಾಂತ, ಜ್ಯೋತಿಷ್ಯ, ಸಂಗೀತ, ಆಯುರ್ವೇದ ಕ್ಷೇತ್ರದಲ್ಲಿ ಅಭುತಪೂರ್ವ ಸಾಧನೆ ಮಾಡಿ ಕೃತಿಗಳನ್ನು ರಚನೆ ಮಾಡಿದವರಿದ್ದಾರೆ. ಹಾಗೇ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಾಹಿತ್ಯದಲ್ಲೂ ಹಲವರು ಉತ್ತಮ ಕೃತಿಗಳನ್ನು ನೀಡಿದ್ದಾರೆ ಎಂದರು.

ಉತ್ತಮ ಊಟೋಚಾರ: ಹವ್ಯಕರ ಊಟ-ಉಪಚಾರಗಳ ಬಗ್ಗೆ ಶ್ಲಾ ಸಿದ ಮಲ್ಲೇಪುರಂ ವೆಂಕಟೇಶ್‌, ತಂಬುಳಿಯುಕ್ತವಾದ ಊಟ ನಿಜಕ್ಕೂ ಸತ್ವಭರಿತವಾದದ್ದು. ಬೇರೆ ಬೇರೆ ರೀತಿಯ ಪಾಕಗಳು ನಮ್ಮ ದೇಹ ಸ್ವಾಸ್ಥ್ಯಕ್ಕೆ ನೆರವಾಗುತ್ತವೆ ಎಂದರು.

Advertisement

ವಿದ್ಯಾ ವಾಚಸ್ಪತಿ ಡಾ. ಅರಳು ಮಲ್ಲಿಗೆ ಪಾರ್ಥ ಸಾರಥಿ, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಸಮುದಾಯದ 75 ಲೇಖಕರನ್ನು ಸನ್ಮಾನಿಸಿದರು. ಅಖೀಲ ಹವ್ಯಕ ಮಹಾಸಭೆಯ ಅಮೃತ ಮಹೋತ್ಸವದ ಅಂಗವಾಗಿ 75 ಪುಸ್ತಕಗಳ ಬಿಡುಗಡೆಗೆ ಯೋಜನೆ ರೂಪಿಸಲಾಗಿದ್ದರೂ, ಕಾರ್ಯಕ್ರಮದ ದಿನ 100 ಕೃತಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು.

ಹವ್ಯಕ ಸಮುದಾಯದ ಲೇಖಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅದನ್ನು ಹೆಚ್ಚಿಸಲು ನಿರ್ಧರಿಸಲಾಯಿತು ಎಂದು ಸಮ್ಮೇಳನದ  ಮಾಧ್ಯಮ ವಿಭಾಗದ ಸಂದೇಶ್‌ ತಲಕಾಲಕೊಪ್ಪ “ಉದಯವಾಣಿ’ಗೆ ತಿಳಿಸಿದ್ದಾರೆ.  ಇದು ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ಸೇರಿಸಲಿದೆ ಎಂದು ಸಮ್ಮೇಳನ ಆಯೋಜಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next