Advertisement

ಜನಮನ ಗೆದ್ದ ಶ್ರೀರಾಮಾಯಣ ದರ್ಶನಂ

10:04 AM Jan 06, 2019 | |

ಹಾವೇರಿ: ಮೈಸೂರು ರಂಗಾಯಣದಿಂದ ಪ್ರದರ್ಶನಗೊಂಡ ರಾಷ್ಟ್ರಕವಿ ಕುವೆಂಪುರವರ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ರಂಗಪ್ರಸ್ತುತಿ ಹಾನಗಲ್ಲ ತಾಲೂಕಿನ ಶೇಷಗಿರಿ ಗ್ರಾಮದ ಉದಾಸಿ ಕಲಾಕ್ಷೇತ್ರದಲ್ಲಿ ಮನೋಜ್ಞವಾಗಿ ಪ್ರದರ್ಶನಗೊಂಡಿತು.

Advertisement

ಸಂಪೂರ್ಣ ಹಳಗನ್ನಡದಲ್ಲಿರುವ ಮಹಾಕಾವ್ಯವನ್ನು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಪ್ರಸ್ತುತ ಪಡಿಸಿದ್ದು ಶ್ಲಾಘನೀಯವಾಗಿತ್ತು. ಸ್ವಚ್ಛ, ಸ್ಪಷ್ಟ, ಹಳಗನ್ನಡದ ಶಬ್ದ ಜೋಡಣೆಗಳನ್ನು ಬಿಡಿಸಿ ಹೇಳುವ ಧ್ವನಿ ಉಚ್ಛಾರಣೆಯಿಂದ ರಂಗಪ್ರಸ್ತುತಿಯ ಎಲ್ಲ ಕಲಾವಿದರು ನಿಜ ಅರ್ಥದಲ್ಲಿ ಮಹಾಕಾವ್ಯಕ್ಕೆ ಮಹಾ ಗೌರವ ಸಲ್ಲಿಸಿದರು.

ಕ್ರೌಂಚ ಮರು ಹುಟ್ಟು, ರಾಮನ ಪಟ್ಟಾಭಿಷೇಕ, ಮಂಥರೆಯ ಕಾರಸ್ಥಾನ, ವನವಾಸ, ಶೂರ್ಪನಖೀಯ ಪ್ರವೇಶ, ಮಾರೀಚನ ಮಾಯಾಜಿಂಕೆ ಪ್ರಸಂಗ, ಸೀತಾಪಹರಣ, ವಾಲೀವಧೆ, ಅಶೋಕವನದ ಏಕಾಂಗಿ ಸೀತೆ, ಮಂಡೋಧರಿ, ವಿಭೀಷಣರ ಮಾನವೀಯ ಘಟನಾವಳಿಗಳು ಕೊನೆಗೆ ರಾವಣ ವದೆ. ಹೀಗೆ ಸಾಲು ಸಾಲು ಪ್ರಸಂಗಗಳೊಂದಿಗೆ ‘ಶ್ರೀರಾಮಾಯಣ ದರ್ಶನಂ’ ಪ್ರದರ್ಶನಗೊಂಡಿತು. ಮುಖ್ಯವಾಗಿ ಇಂದ್ರಜಿತುವಿನ ಸಾವು, ವಿಭಿಷಣ ಪುತ್ರಿ ತ್ರಿಜಟೆಯ ಮೇಲಿನ ರಾವಣನ ಪುತ್ರಿ ಪ್ರೀತಿ ಹಾಗೂ ಕುಂಭಕರ್ಣನ ನಿದ್ರಾಭಂಗ ಪ್ರಸಂಗಗಳು ಅಚ್ಚಳಿಯದೆ ಮನಸ್ಸಿಲ್ಲಿ ಉಳಿಯುವಂತಿದ್ದವು.

ಮಹಾಕವಿ ಕುವೆಂಪುರವರು ವಿಶ್ವದೆತ್ತರಕ್ಕೆ ನಿಲ್ಲುವುದು ‘ಶ್ರೀರಾಮಾಯಣ ದರ್ಶನಂ’ನ ಅಂತ್ಯದಲ್ಲಿ. ಏಕೆಂದರೆ ಸೀತೆಯೊಂದಿಗೆ ರಾಮನೂ ಅಗ್ನಿ ಪರೀಕ್ಷೆಗೊಳಗಾಗುವುದರೊಂದಿಗೆ ಮಂಥರೆ ಮತ್ತು ರಾವಣರು ಪಶ್ಚಾತಾಪದಲ್ಲಿ ಮರುಹುಟ್ಟು ಪಡೆಯುತ್ತಾರೆ. ಹತವಾದ ಕ್ರೌಂಚ ಪಕ್ಷಿ ಮರುಹುಟ್ಟು ಪಡೆದು ಆಕಾಶಕ್ಕೆ ಹಾರುವ ಸಂಕೇತದೊಂದಿಗೆ ಆರಂಭವಾಗುವ ‘ಶ್ರೀರಾಮಾಯಣ ದರ್ಶನಂ’ ಅಂತ್ಯದಲ್ಲಿಯೂ ಅದೇ ಜೀವಧ್ವನಿಯಾಗಿ ಅನುರಣಿಸುವುದು ನೋಡುಗರ ಮನಸೆಳೆಯಿತು. ಮೂಲ ವಾಲ್ಮೀಕಿ ರಾಮಾಯಣದ ಎಲ್ಲ ಹೆಜ್ಜೆ ಗುರುತುಗಳಲ್ಲಿ ಹೆಜ್ಜೆ ಹಾಕುತ್ತಲೇ ಸಾಗುವ ಮಹಾರೂಪಕ ಪ್ರಸ್ತುತ ವರ್ತಮಾನಕ್ಕೂ ಮುಖಾಮಖಿಯಾಯಿತು. ಜನಜನಿತವಾದ ರಾಮಾಯಣವನ್ನು ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರಿಗೆ ಯಾವ ಅಡೆತಡೆಯಿಲ್ಲದೆ ಅರ್ಥವಾಗುವಂತೆ ಆಡಿ ತೋರಿಸುವ ಮೂಲಕ ಮೈಸೂರು ರಂಗಾಯಣ ಎಲ್ಲರ ಹೆಗ್ಗಳಿಕೆ ಪಾತ್ರವಾಯಿತು.

50ಕ್ಕೂ ಹೆಚ್ಚು ಪಾತ್ರಧಾರಿಗಳು, 30ಕ್ಕೂ ಹೆಚ್ಚು ವಾದ್ಯಗಳ ಬಳಕೆ, ನೂರಾರು ವಸ್ತ್ರವಿನ್ಯಾಸ, ಅದ್ಭುತ ದೇಹಭಾಷೆಯ ನಟನೆ, ಯಕ್ಷಗಾನ ಶೈಲಿಯ ಸಂಗೀತ ಮತ್ತು ನಾಟ್ಯಚಲನೆಯೊಂದಿಗೆ ‘ಶ್ರೀ ರಾಮಾಯಣ ದರ್ಶನಂ’ ನಾಟಕ ಮನಸೂರೆಗೊಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next